ಢಾಕಾ : ಬಾಂಗ್ಲಾ ಕ್ರಿಕೆಟ್ ತಂಡದ ಮಾಜಿ ನಾಯಕ ಮುಶ್ರಫೆ ಮೊರ್ತಾಜಾ ಅವರಿಗೆ ಕೊರೊನಾ ವೈರಸ್ ಸೋಂಕಿರುವುದು ದೃಢಪಟ್ಟಿದೆ. ಈ ವಿಚಾರವನ್ನು ಸ್ವತಃ ಅವರ ಸಹೋದರ, ಮೊರ್ಸಾಲಿನ್ ಬಿನ್ ಮೊರ್ತಾಜಾ ಸ್ಪಷ್ಟ ಪಡಿಸಿದ್ದಾರೆ.
ಮುಶ್ರಫೆ ಅವರು ಕಳೆದ ಕೆಲ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ಕೋವಿಡ್-19 ಟೆಸ್ಟ್ ಮಾಡಿಸಲಾಗಿದ್ದು, ಅವರಿಗೆ ಕೋವಿಡ್ ಸೋಂಕಿರೋದು ದೃಢಪಟ್ಟಿದೆ.
ಇನ್ನು ಮುಶ್ರಫೆ ಮನೆಯಲ್ಲೇ ಪ್ರತ್ಯೇಕವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಂಗ್ಲಾದೇಶದ ಸಂಸತ್ತಿನ ಸದಸ್ಯರಾದ ಮೊರ್ತಾಜಾ ಈವರೆಗೂ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿಲ್ಲ. ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟಕ್ಕಾಗಿ ಮುಶ್ರಫೆ ಮೊರ್ತಾಜಾ ಅವರು ತಮ್ಮ ನೆಚ್ಚಿನ ಕಡಗವನ್ನು ಹರಾಜು ಹಾಕಿದ್ದರು.
ಮುಶ್ರಫೆ ಅವರು ತಮ್ಮ ಶ್ರೇಷ್ಠ ವೃತ್ತಿಜೀವನದಲ್ಲಿ 220 ಏಕದಿನ, 36 ಟೆಸ್ಟ್ ಮತ್ತು 54 ಟಿ20 ಪಂದ್ಯಗಳನ್ನು ಆಡಿದ್ದಾರೆ. ಕೋವಿಡ್-19 ಸಮಯದಲ್ಲಿ ಜನರ ಸಹಾಯಕ್ಕೆ ನಿಂತಿದ್ದ ಮುಶ್ರಫೆ, ಕೊರೊನಾದಿಂದ ಬಳಲುತ್ತಿದ್ದ 300 ಕುಟುಂಬಗಳಿಗೆ ಸಹಾಯ ಮಾಡಿದ್ದರು.
ಬಾಂಗ್ಲಾದೇಶದಲ್ಲಿ ಈವರೆಗೂ 1.05 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ದೃಢಪಟ್ಟಿದ್ದು, ಸುಮಾರು 43,000 ಜನರು ಗುಣಮುಖರಾದರೆ 1,300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.








