ಶಾಸಕಿ ರೋಜಾ ಗನ್ ಮ್ಯಾನ್ ಗೆ ಕೊರೊನಾ ಸೋಂಕು
ತಿರುಮಲ, ಜುಲೈ 11: ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಶಾಸಕಿ, ಎಪಿಐಸಿ ಚೇರ್ಮನ್ ರೋಜಾ ಅವರ ಗನ್ ಮ್ಯಾನ್ ಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ರೋಜಾ ಅಭಿಮಾನಿಗಳು ಈ ಬಗ್ಗೆ ಆತಂಕಿತರಾಗಿದ್ದು, ರೋಜಾ ಅವರನ್ನು ವಿಚಾರಿಸತೊಡಗಿದ್ದಾರೆ. ಅಭಿಮಾನಿಗಳಿಗೆ ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮದ ಅಧ್ಯಕ್ಷೆ, ನಗರಿ ಕ್ಷೇತ್ರದ ಶಾಸಕಿ ರೋಜಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಈ ಬಗ್ಗೆ ಯಾರೂ ಆತಂಕಕ್ಕೆ ಒಳಗಾಗಬೇಡಿ. ನನ್ನ ಗನ್ ಮ್ಯಾನ್ ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರು ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (SWIMS)ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಆರೋಗ್ಯ ಇಲಾಖೆಯು ಮುಂಜಾಗ್ರತಾ ಕ್ರಮವಾಗಿ
ನಟಿ, ಶಾಸಕಿ ರೋಜಾ ಹಾಗೂ ಕಚೇರಿ ಸಿಬ್ಬಂದಿಗಳಿಗೆ ಸ್ವಾಬ್ ಟೆಸ್ಟ್ ಸೇರಿದಂತೆ ಕೊವಿಡ್ 19 ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದೆ.

ಜುಲೈ 8ರಂದು ವೈಎಸ್ಸಾರ್ ಕಾಂಗ್ರೆಸ್ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ರೈತರ ಕಲ್ಯಾಣ ಯೋಜನೆಗಳ ಕುರಿತ ಕಾರ್ಯಕ್ರಮಗಳಲ್ಲಿ ರೋಜಾ ಪಾಲ್ಗೊಂಡಿದ್ದರು. ಇತ್ತೀಚೆಗೆ 108 ಆಂಬ್ಯುಲೆನ್ಸ್ ಸೇವೆ ಉದ್ಘಾಟನೆ ಮಾಡುವ ಸಂದರ್ಭದಲ್ಲಿ ಕೂಡ ರೋಜಾ ಸ್ವಯಂ ವಾಹನ ಚಾಲನೆ ಮಾಡಲು ಮುಂದಾಗಿದ್ದರು. ಇದರಿಂದ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು ಮತ್ತು ಮಾಸ್ಕ್ ಧರಿಸದೇ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗಿಯಾದ ಕಾರಣಕ್ಕೆ ಅವರು ಅನೇಕರಿಂದ ಟೀಕೆಗೆ ಒಳಗಾಗಿದ್ದರು.
ಇಲ್ಲಿಯವರೆಗೆ ಆಂಧ್ರಪ್ರದೇಶದಲ್ಲಿ 23,814 ಕೊರೊನಾ ಸೋಂಕು ಪ್ರಕರಣಗಳಿದ್ದು, ಈ ಪೈಕಿ 11,383 ಸಕ್ರಿಯ ಸೋಂಕು ಪ್ರಕರಣಗಳಿವೆ. 12,154 ಮಂದಿ ಗುಣಮುಖರಾಗಿದ್ದರೆ, 277 ಮಂದಿ ಮೃತ ಪಟ್ಟಿದ್ದಾರೆ.








