ಬೆಂಗಳೂರು : ದೇಶದಲ್ಲಿ ಮಾರಕ ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿರುವುದಕ್ಕೆ ತಬ್ಲಿಘಿಗಳೇ ಕಾರಣ ಎಂದು ಹೇಳುತ್ತಿರುವುದು ಸರಿಯಲ್ಲ. ಇದು ಆರ್.ಎಸ್.ಎಸ್ ಹುನ್ನಾರ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತು ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೋವಿಡ್ 19 ಮಹಾಮಾರಿ ರೋಗವನ್ನು ಮೊದಲೇ ದಿನದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ತಡೆಗಟ್ಟುವಲ್ಲಿ ವಿಫಲವಾಗಿದೆ. ಜನವರಿ 30 ರಂದು ಕೊರೊನಾ ವೈರಸ್ ಕೇರಳದಲ್ಲಿ ಪತ್ತೆಯಾಗಿತ್ತು. ಹೀಗಾಗಿ ದೇಶದಲ್ಲಿ ಈ ಸೋಂಕು ಹರಡದಂತೆ ತಡೆಯಲು ಜನವರಿ, ಫೆಬ್ರವರಿ ಸೇರಿದಂತೆ ಎರಡು ತಿಂಗಳ ಸಮಯಾವಕಾಶ ಇತ್ತು. ಆದರೆ, ಲಾಕ್ ಡೌನ್ ಮಾಡಿದ್ದು ಮಾರ್ಚ್ ಕೊನೆ ವಾರದಲ್ಲಿ.ಅದಕ್ಕೂ ಮೊದಲು ಸಿದ್ಧತೆಗಳನ್ನ ಮಾಡಲು ಸಾಕಷ್ಟು ಸಮಯವಿತ್ತು. ಆಗ ಯಾವ ಸರ್ಕಾರಗಳೂ ಏನೂ ಮಾಡಲಿಲ್ಲ. ಕೇಂದ್ರ ಸರ್ಕಾರ ನರೇಂದ್ರ ಮೋದಿ ಅವರ ವಿದೇಶಿ ವಿಮಾನಯಾನ ಬಂದ್ ಮಾಡಿದ್ರೆ ಈ ಸಮಸ್ಯೆ ಇರುತ್ತಿರಲಿಲ್ಲ. ಇಷ್ಟು ದೊಡ್ಡ ಮಟ್ಟದಲ್ಲಿ ರೋಗ ಹಬ್ಬುತ್ತಿರಲಿಲ್ಲ ಎಂದು ಹರಿಹಾಯ್ದರು.
ಇನ್ನು ದೇಶದಾದ್ಯಂತ ಕೊರೊನಾ ವೈರಸ್ ಹೆಚ್ಚಾಗಲು ತಬ್ಲಿಘಿಗಳೇ ಕಾರಣ ಎಂದು ರಾಜಕೀಯ ಮಾಡಲಾಗುತ್ತಿದೆ. ಆದರೆ, ಇಟಲಿ, ಅಮೇರಿಕಾ, ಸ್ಪೇನ್ ನಲ್ಲಿ ಯಾವ ತಬ್ಲಿಘಿಗಳಿದ್ದಾರೆ, ಅಸಲಿಗೆ ತಬ್ಲಿಘಿಗಳಿಗೆ ಸಭೆ ಮಾಡಲು ಲೈಸೆನ್ಸ್ ಕೊಟ್ಟವರು ಯಾರು ಎಂದು ಪ್ರಶ್ನಿಸಿದರಲ್ಲದೇ, ಪೊಲೀಸ್ ಮತ್ತು ಕೇಂದ್ರ ಸರ್ಕಾರವೇ ಅನುಮತಿ ಕೊಟ್ಟು ಈಗ ಗೂಬೆ ಕೂರಿಸುವುದು ಎಷ್ಟು ಸರಿ.. ಇವೆಲ್ಲಾ ಆರ್ಎಸ್ಎಸ್ ನವರ ಹುನ್ನಾರ ಎಂದು ಆಕ್ರೋಶ ಹೊರಹಾಕಿದರು.
ಇದೇ ವೇಳೆ ಮೋದಿ ವಿರುದ್ಧ ಕಿಡಿಕಾರಿದ ಸಿದ್ದರಾಮಯ್ಯ, ಈವರೆಗೆ 35 ಸಾವಿರ ಕೋಟಿ ಹಣ ಪಿಎಂ ಫಂಡ್ ಗೆ ಬಂದಿದೆ. ಕರ್ನಾಟಕದಿಂದ ಮೂರು ಸಾವಿರ ಕೋಟಿ ಹಣ ಹೋಗಿದೆ. ಈ ಹಣವನ್ನು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಕೊಡುವುದಕ್ಕೆ ಆಗುವುದಿಲ್ಲವಾ ಎಂದರು. ನರೇಂದ್ರ ಮೋದಿ ಕೋವಿಡ್ ಪ್ಯಾಕೇಜ್ ಎಂದು ಯಾವ ರಾಜ್ಯಕ್ಕೂ ಒಂದು ರೂಪಾಯಿ ಹಣ ನೀಡಿಲ್ಲ. ಆದರೆ, ದೀಪ ಹಚ್ಚಿ, ಚಪ್ಪಾಳೆ ಹೊಡಿರಿ ಅಂತಾರೆ. ಇದ್ರಿಂದ ಬಡವರ ಕಷ್ಟ ನೀಗುತ್ತಾ ಎಂದು ಪ್ರಶ್ನಿಸಿದರು.








