ರಾಯಚೂರು : ಕೊರೊನಾ ದೊಡ್ಡ ರೋಗವೇ ಅಲ್ಲ, ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿದರೆ ಮಾತ್ರ ಕಡಿಮೆ ಆಗುತ್ತದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ರಾಯಚೂರಿನ ಮಸ್ಕಿಯ ಬುದ್ದಿನ್ನಿಯಲ್ಲಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಸನ್ಮಾನ ಮಾಡಿಸಿಕೊಂಡು ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ, ಎಷ್ಟೇ ಲಾಕ್ ಡೌನ್ ಮಾಡಿದರೂ, ಜನರು ಸಹಕಾರ ನೀಡಿದಾಗ ಮಾತ್ರ ಕೊರೊನಾ ತಡೆಯಲು ಸಾಧ್ಯ ಎಂದರು.
ಜನರು ಸ್ವಯಂ ಪ್ರೇರಿತರಾಗಿ ಸಾಮಾಜಿಕ ಅಂತರ ಕಾಪಾಡಬೇಕು ಎಂದು ರಮೇಶ್ ಜಾರಕಿಹೊಳಿ, ಪ್ರಧಾನಿಯವರ ಮಾರ್ಗದರ್ಶನ ಹಾಗೂ ಯಡಿಯೂರಪ್ಪನವರ ಸೂಚನೆ ಪಾಲನೆ ಮಾಡಿದರೆ, ವೈದ್ಯರ ಸಲಹೆಗಳನ್ನು ಜನ ಪಾಲಿಸಿದರೆ ಕೊರೊನಾ ದೊಡ್ಡ ರೋಗ ಅಲ್ವೇ ಅಲ್ಲ ಎಂದು ಹೇಳಿದರು.
ಕೊರೊನಾದಿಂದ ಒಬ್ಬ ಸತ್ತರು ಸಾವೇ, ಸಾವಿರ ಸತ್ತರು ಸಾವೇ, ಸಾವು ಕಡಿಮೆ ಆಗಬೇಕು ಎಂಬುವುದು ಎಲ್ಲರ ಭಾವನೆ. ಯೂರೋಪ್ ದೇಶಕ್ಕೆ ಹೋಲಿಸಿದರೆ ನಮ್ಮ ದೇಶದಲ್ಲಿ ಜನರು ಗಟ್ಟಿಯಿದ್ದಾರೆ. ಕೊರೊನಾ ತಡೆಗೆ ದೇವರು ಸಹಕಾರ ನೀಡುತ್ತಾನೆ, ಎಲ್ಲವೂ ಸರಿ ಆಗುತ್ತೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.








