ಕೊರೊನಾ ಸೋಂಕು ಹರಡುವುದನ್ನ ತಡೆಯಲು ಕೇಂದ್ರ ಸರ್ಕಾರ ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿದೆ.ಅದರಂತೆ ಎರಡನೇ ಅವಧಿಯ ಲಾಕ್ ಡೌನ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಅದಕ್ಕಾಗಿ, ಪ್ರಧಾನಿ ಮೋದಿ ಅಂಡ್ ಟೀಂ ತ್ರಿವರ್ಣ ತಂತ್ರದ ಮೊರೆ ಹೋಗಲಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಏನಿದು ತ್ರಿವರ್ಣ ತಂತ್ರ?
ದೇಶದಲ್ಲಿ ಕೊರೊನಾ ಸೋಂಕು ಪೀಡಿತ, ಹಾಗೂ ಸೋಂಕು ರಹಿತ ವಲಯಗಳು, ಮತ್ತು ಜನರ ಓಡಾಟದ ಮೇಲೆ ಕಣ್ಣಿಡಲು ಕೆಂಪು, ಕಿತ್ತಳೆ, ಹಸಿರು ಬಣ್ಣಗಳನ್ನ ಬಳಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರೆಡ್ ಝೋನ್, ಗ್ರೀನ್ ಝೋನ್, ಮತ್ತು ಆರೆಂಜ್ ಝೋನ್ ಗಳೆಂದು ಸೋಂಕು ಪೀಡಿತ, ಹಾಗೂ ಸೋಂಕು ರಹಿತ ವಲಯಗಳನ್ನು ಗುರುತಿಸಲಾಗುವುದು.
ರೆಡ್ ಝೋನ್ ಹೇಗಿರಲಿದೆ..?
15ಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬಂದಿರುವ ಪ್ರದೇಶವನ್ನು ರೆಡ್ ಝೋನ್ ಎಂದು ಗುರುತಿಸಲಾಗುತ್ತದೆ. ಆ ಪ್ರದೇಶದಲ್ಲಿ ಯಾವುದೇ ರೀತಿಯ ಚಲನವಲನಗಳಿಗೆ ಅವಕಾಶ ಇರುವುದಿಲ್ಲ.
ಆರೆಂಜ್ ಝೋನ್ ಹೇಗಿರಲಿದೆ..?
15ಕ್ಕಿಂತ ಕಡಿಮೆ ಕೊರೊನಾ ಸೋಂಕಿತ ಪ್ರಕರಣಗಳು ಇರುವ ಪ್ರದೇಶವನ್ನ ಆರೆಂಜ್ ಝೋನ್ ಎಂದು ಗುರುತಿಸಲಾಗುತ್ತದೆ. ಅಲ್ಲಿ, ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗುತ್ತೆ. ದಿನ ಬಳಕೆಯ ವಸ್ತು ಖರೀದಿ, ನಿಗದಿತ ಪ್ರಮಾಣದ ಸಾರಿಗೆ ಹಾಗೂ ಕೃಷಿಗೆ ಅವಕಾಶ ನೀಡಲಾಗುತ್ತದೆ.
ಗ್ರೀನ್ ಝೋನ್ ಹೇಗಿರಲಿದೆ..?
ಗ್ರೀನ್ ಝೋನ್ ಎಂದ್ರೆ ಇಲ್ಲಿಯವರೆಗೂ ಒಂದೂ ಕೊರೊನಾ ಪ್ರಕರಣಗಳು ಪತ್ತೆಯಾಗದ ಜಿಲ್ಲೆಗಳನ್ನ ಗ್ರೀನ್ ಝೋನ್ ಎಂದು ಗುರುತಿಸಲಾಗುವುದು. ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ ದೇಶದಲ್ಲಿ 400 ಕೊರೊನಾ ಸೋಂಕು ರಹಿತ ಜಿಲ್ಲೆಗಳಿವೆ.








