ವಾಷಿಂಗಟನ್: ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಮಾನವ ಸೃಷ್ಟಿಯೋ, ಅಥವಾ ಇದು ಪ್ರಾಣಿಯಿಂದ ಹರಡಿತಾ ಎಂಬ ಪ್ರಶ್ನೆಗಳು ಸದ್ಯ ಎಲ್ಲರಲ್ಲೂ ಮೂಡಿದೆ. ಒಂದು ಕಡೆ ಕೊರೊನಾ ವೈರಸ್ ಚೀನಾನೇ ಸೃಷ್ಟಿಸಿದ್ದು ಅನ್ನೋ ಮಾತುಗಳು ವಿಶ್ವದಾದ್ಯಂತ ಕೇಳಿ ಬರ್ತಿವೆ. ಅದರಲ್ಲೂ ವಿಶ್ವದ ದೊಡ್ಡಣ್ಣ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದ ವುಹಾನ್ ಲ್ಯಾಬ್ ನಲ್ಲಿ ಕೊರೊನಾ ವೈರಸ್ ಸೃಷ್ಟಿಯಾಗಿದೆ ಅನ್ನೋ ವಿಚಾರವನ್ನ ಪತ್ತೆ ಮಾಡಲು ನಾವು ಮುಂದಾಗಿದ್ದೇವೆ ಅಂತ ಹೇಳಿಕೆ ನೀಡಿದ್ದರು. ಇದೀಗ ಈ ಬಗ್ಗೆ ಈಗ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟನೆ ನೀಡಿದೆ. ಕೊರೊನಾ ವೈರಸ್ ಪ್ರಾಣಿಗಳಿಂದ ಹರಡಿದ ಸೋಂಕು ಹೊರತು ಮಾನವ ಸೃಷ್ಟಿಯಲ್ಲ ಅಂತ ಹೇಳಿದೆ.
ಈ ಬಗ್ಗೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರ ಫಡೆಲಾ ಚೈಬ್, ಈಗಿರುವ ಸಾಕ್ಷ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಕೊರೊನಾ ವೈರಸ್ ಪ್ರಾಣಿಗಳ ಮೂಲಕ ಹರಡಿದ್ದೇ ಹೊರತು, ಯಾವುದೇ ಮಾನವಸೃಷ್ಟಿಯಲ್ಲ ಹಾಗೂ ಯಾವುದೇ ಪ್ರಯೋಗಾಲಯದಲ್ಲಿ ಉತ್ಪತ್ತಿಯಾದದ್ದಲ್ಲ ಎಂದು ಹೇಳಿದ್ದಾರೆ.
ಇನ್ನು ಯಾವ ಜಾತಿಯ ಪ್ರಾಣಿಯಿಂದ ಕೊರೊನಾ ಮನುಷ್ಯನಿಗೆ ಹರಡಿದೆ ಅನ್ನೋ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಆದರೆ ಮೇಲ್ನೋಟಕ್ಕೆ ಬಾವಲಿಗಳಿಂದ ಹಬ್ಬಿರುವ ಬಗ್ಗೆ ಶಂಕೆಯಿದೆ. ಅದು ಬಾವಲಿಯಿಂದ ಮನಷ್ಯನಿಗೆ ಹೇಗೆ ಹರಡಿತು ಅನ್ನೋ ಬಗ್ಗೆ ಇನ್ನೂ ಸಂಶೋಧನೆ ಜಾರಿಯಲ್ಲಿದೆ ಅಂತ ಚೈಬ್ ಹೇಳಿದ್ದಾರೆ.








