ಮಹಾಮಾರಿ ಕೊರೊನಾ ವಿಶ್ವದಲ್ಲೆಡೆ ರುದ್ರನರ್ತನ ಮಾಡುತ್ತಾ ಮರಣಮೃದಂಗವನ್ನು ಮುಂದುವರಿಸಿದೆ. ಇಲ್ಲಿವರೆಗೂ ಈ ಸೋಂಕಿಗೆ 40 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಲು ವಿಜ್ಞಾನಿಗಳು ಸತತ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಆದ್ರೆ ಇಲ್ಲಿವರೆಗೂ ಇದಕ್ಕೆ ಸೂಕ್ತ ಲಸಿಕೆ ದೊರೆತಿಲ್ಲ.. ಇದೀಗ ಕೊರೊನಾ ನಿವಾರಣೆಗೆ ಅಮೆರಿಕಾದ ಹ್ಯೂಸ್ಟನ್ ನಲ್ಲಿರುವ ಆಸ್ಪತ್ರೆಯೊಂದು ಹೊಸ ಪ್ರಯೋಗವನ್ನ ಮಾಡುತ್ತಿದೆ. ಬ್ಲಡ್ ಟ್ರಾನ್ಸ್ ಫ್ಯೂಶನ್ ಥೆರಪಿ ಮೂಲಕ ಕೊರೊನಾವನ್ನ ಕ್ಯೂರ್ ಮಾಡಬಹುದೇ ಅನ್ನೋ ಬಗ್ಗೆ ಅವರು ಪ್ರಯೋಗ ನಡೆಸಿದ್ದಾರೆ.
ಏನಿದು ಬ್ಲಡ್ ಟ್ರಾನ್ಸ್ ಫ್ಯೂಶನ್ ಥೆರಪಿ..?
ಬ್ಲಡ್ ಟ್ರಾನ್ಸ್ ಫ್ಯೂಶನ್ ಥೆರಪಿ ಅಂದ್ರೆ ಈಗಾಗಲೇ ಕೊರೊನಾ ಸೋಂಕಿನಿಂದ ಗುಣಮುಖವಾಗಿರುವ ವ್ಯಕ್ತಿಯ ರಕ್ತವನ್ನು ತೆಗೆದುಕೊಂಡು ಕೊರೊನಾದಿಂದ ಬಳಲುತ್ತಿರುವ ಸೋಂಕಿತನಿಗೆ ಚಿಕಿತ್ಸೆ ನೀಡುವ ವಿಧಾನ. ಇನ್ನು ಬಿಡಿಸಿ ಹೇಳಬೇಕೆಂದ್ರೆ.. ಕೊರೊನಾದಿಂದ ಗುಣಮುಖವಾದ ರೋಗಿ ಬ್ಲಡ್ ಪ್ಲಾಸ್ಮಾ (ಹೆಪ್ಪುಗಟ್ಟಿದ ರಕ್ತ)ವನ್ನ ತೆಗೆದುಕೊಂಡು ಅದನ್ನ ಸತತ ಎರಡು ವಾರಗಳ ಕಾಲ ಮಾನಿಟರ್ ಮಾಡಲಾಗುತ್ತದೆ. ನಂತರ ಇದನ್ನ ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸುವ ಪ್ರಕ್ರಿಯೆ.
ಇದು ಹೇಗೆ ಕೆಲಸ ಮಾಡುತ್ತೆ..?
ಕೊರೊನಾ ಸೋಂಕಿನಿಂದ ಗುಣಮುಖರಾದವರ ಪ್ಲಾಸ್ಮಾವನ್ನ ತೆಗೆದುಕೊಂಡು ಸೋಂಕಿತರಿಗೆ ಚಿಕಿತ್ಸೆ ನೀಡಿದ್ರೆ, ಅದರಲ್ಲಿನ ಆಂಟಿ ಬಾಡೀಸ್ ನಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದಾಗಿ ಅವರು ಸೋಂಕಿನ ವಿರುದ್ಧ ಹೋರಾಡುವ ಶಕ್ತಿಯನ್ನ ಪಡೆಯುತ್ತಾರೆ.
ಅಮೆರಿಕಾದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ನಿಂದ ಕಳೆದ ವಾರ ಬ್ಲಡ್ ಟ್ರಾನ್ಸ್ ಫ್ಯೂಶನ್ ಥೆರಪಿಗೆ ಅನುಮತಿ ಸಿಕ್ಕಿದ್ದು, ಈಗಾಗಲೇ ರೋಗಿಗಳ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಇದು ಸಂಪೂರ್ಣವಾಗಿ ಸಕ್ಸಸ್ ಆದ್ರೆ, ಕೊರೊನಾ ಚಿಕಿತ್ಸೆ ಮತ್ತಷ್ಟು ವೇಗ ಪಡೆಯಲಿದೆ.








