ಕೊಡಗು: ಕೊರೊನಾ ಭೀತಿ ಹಿನ್ನೆಲೆ ರಾಜ್ಯ ಸರ್ಕಾರ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಿದೆ. ಒಂದು ವಾರದ ಕಾಲ ಸಾರ್ವಜನಿಕ ಕಾರ್ಯಕ್ರಮಗಳು, ಅದ್ಧೂರಿ ಮದುವೆಗಳು, ಮಾಲ್, ಸಿನಿಮಾ ಹಾಲ್ ಗಳನ್ನು ಬಂದ್ ಮಾಡುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಜನರು ಸಹ ವೈರಸ್ ಹರಡದಂತೆ ತಡೆಯಲು ಒಂದಿಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಕೊರೊನಾಗೆ ಹೆದರಿದ ಜನರು ದುಬಾರಿಯಾದ್ರೂ ಸರಿ ಮಾಸ್ಕ್ ಧರಿಸಿ ಓಡಾಡ್ತಿದ್ದಾರೆ. ಆದ್ರೆ ಕೊಡಗಿನ ಬಸ್ ಚಾಲಕರೊಬ್ಬರು ಮಾಸ್ಕ್ ಬದಲು ಹೆಲ್ಮೆಟ್ ಧರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಹೌದು..! ಮಡಿಕೇರಿ ಮತ್ತು ಕುಶಾಲನಗರ ಮಾರ್ಗವಾಗಿ ಸಂಚರಿಸುವ ಕೆಎಸ್ ಆರ್ ಟಿಸಿ ಬಸ್ ಚಾಲಕ ಉಷಾ ಕುಮಾರ್ ಅವರು, ಹೆಲ್ಮೆಟ್ ಹಾಕಿಕೊಂಡು ಬಸ್ ಚಾಲನೆ ಮಾಡುತ್ತಿದ್ದಾರೆ. ಕೊಡಗಿನಲ್ಲಿ ಕೊರೊನಾ ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಚಾಲಕ ಉಷಾ ಕುಮಾರ್ ಅವರು ಸಹ ಮಾಸ್ಕ್ ಗಾಗಿ ಹುಡುಕಾಟ ನಡೆಸಿದ್ದರಂತೆ. ಆದ್ರೆ ಎಲ್ಲೂ ಮಾಸ್ಕ್ ಸಿಗದ ಹಿನ್ನೆಲೆ ಹೆಲ್ಮೆಟ್ ಧರಿಸಿಯೇ ಬಸ್ ಚಾಲನೆ ಮಾಡುತ್ತಿದ್ದಾರೆ.