ವಾಷಿಂಗ್ಟನ್ : ಅಮೆರಿಕದಲ್ಲಿ ಕೊರೊನಾ ಅಬ್ಬರ ಜೋರಾಗಿದ್ದು, ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಆಪ್ತ ಸಹಾಯಕಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ, ಶ್ವೇತಭವನದಲ್ಲಿ ಕಾರ್ಯನಿರ್ವಹಿಸುವವರಲ್ಲಿ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಎರಡು ತಿಂಗಳುಗಳಿಂದ ಕೊರೊನಾ ಸೋಂಕಿತೆ ಕಚೇರಿಗೆ ಬಂದಿರಲಿಲ್ಲ. ಆಕೆಯಲ್ಲಿ ಸೋಂಕಿನ ಲಕ್ಷಣಗಳೂ ಕಾಣಿಸಿರಲಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಇದೀಗ ಇವಾಂಕಾ ಮತ್ತು ಆಕೆಯ ಪತಿ ಜೇರೆಡ್ ಕುಶ್ನರ್ ಅವರ ಮಾದರಿಗಳನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕು ತಗುಲಿಲ್ಲ ಎಂಬುದು ದೃಢಪಟ್ಟಿದೆ ಎಂದು ಟ್ರಂಪ್ ಕಟುಂಬದ ಆಪ್ತ ಮೂಲಗಳು ಹೇಳಿವೆ.
ಇನ್ನು ಎರಡು ದಿನ ಹಿಂದಷ್ಟೇ ಡೊನಾಲ್ಡ್ ಟ್ರಂಪ್ ಅವರ ಆಪ್ತ ಸಹಾಯಕನಿಗೆ ಕೊರೊನಾ ತಗುಲಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಪ್ರತಿ ದಿನ ಸೋಂಕು ಪತ್ತೆ ಪರೀಕ್ಷೆಗೆ ಒಳಗಾಗುವುದಾಗಿ ಟ್ರಂಪ್ ಹೇಳಿದ್ದರು. ಉಪಾಧ್ಯಕ್ಷಮೈಕ್ ಪೆನ್ಸ್ ಸೇರಿದಂತೆ ಶ್ವೇತ ಭವನದ ಎಲ್ಲರೂ ಪ್ರತಿ ದಿನ ಕೊರೊನಾ ಪರೀಕ್ಷೆಗೆ ಒಳಗಾಗುವುದಾಗಿಯೂ ಅವರು ತಿಳಿಸಿದ್ದರು.
ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಅಂಕಿಅಂಶ ಪ್ರಕಾರ ಅಮೆರಿಕದಾದ್ಯಂತ ಈವರೆಗೆ ಕೊರೊನಾದಿಂದಾಗಿ ಮೃತಪಟ್ಟವರ ಸಂಖ್ಯೆ 80,300 ತಲುಪಿದೆ. ಒಟ್ಟಾರೆಯಾಗಿ 13,47,309 ಮಂದಿಗೆ ಸೋಂಕು ತಗುಲಿದೆ.








