ನವದೆಹಲಿ : ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಸೋಂಕು ಸಿಕ್ಕ ಸಿಕ್ಕದೇಹಗಳಿಗೆ ಹೊಕ್ಕಿ ಮರಣ ಮೃದಂಗ ಬಾರಿಸುತ್ತಿದೆ. ಸದ್ಯ ಈ ಹೆಮ್ಮಾರಿಗೆ ವಿಶ್ವದಾದ್ಯಂತ ಏಳು ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರೇ, ದೇಶದಲ್ಲಿ 54,849 ಮಂದಿಯನ್ನು ಮಹಾಮಾರಿ ಬಲಿ ಪಡೆದಿದೆ. ಇದರ ಮಧ್ಯೆ ಕೊರೊನಾ ವೈರಸ್ ರಸ್ತೆ ಅಪಘಾತಗಳಿಂದ 20 ಸಾವಿರಕ್ಕೂ ಅಧಿಕ ಮಂದಿಯನ್ನು ರಕ್ಷಿಸಿದೆಯಂತೆ.
ಹೌದು..! ಕೊರೊನಾ ನಿಯಂತ್ರಣಕ್ಕಾಗಿ ಹೇರಲಾದ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ವಾಹನ ಸಂಚಾರ ಕಡಿಮೆಯಾಗಿದೆ. ಪರಿಣಾಮ ಪರಿಣಾಮ ಅಪಘಾತಗಳ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿದೆ. ರಸ್ತೆ ಸುರಕ್ಷಿತೆ ಕುರಿತು ಸುಪ್ರೀಂ ಕೋರ್ಟ್ ಸಮಿತಿಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಏಪ್ರಿಲ್ ಮತ್ತು ಜೂನ್ ತಿಂಗಳ ಮಧ್ಯೆ ನಡೆದ ಅಪಘಾತಗಳ ಮಾಹಿತಿಯನ್ನು ನೀಡಿವೆ.
ಇದರಲ್ಲಿ ಕಳೆದ ವರ್ಷ ಏಪ್ರಿಲ್ ಮತ್ತು ಜೂನ್ ನಡುವೆ 41,032 ಮಂದಿ ಅಪಘಾತಕ್ಕೆ ಬಲಿಯಾಗಿದ್ದರು. ಆದರೆ ಈ ವರ್ಷ ಈ ಅವಧಿಯಲ್ಲಿ 20,732 ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಮೃತರ ಸಂಖ್ಯೆ ಶೇ.49.47ರಷ್ಟು ಇಳಿಕೆಯಾಗಿದೆ.
ತಜ್ಞರು ಅಪಘಾತ ಕಡಿಮೆಯಾಗಲು ಎರಡು ಕಾರಣ ನೀಡುತ್ತಿದ್ದಾರೆ. ಒಂದು ಕೋವಿಡ್ 19ನಿಂದಾಗಿ ಗಣನೀಯ ಪ್ರಮಾಣದಲ್ಲಿ ವಾಹನಗಳು ರಸ್ತೆಗೆ ಇಳಿಯದಿರುವುದು ಇನ್ನೊಂದು ಭಾರೀ ದಂಡ ವಿಧಿಸಿರೋದು.