ಬೀಜಿಂಗ್: ಮಹಾಮಾರಿ ನೊವೆಲ್ ಕೊರೊನಾ ಸೋಂಕಿನಿಂದ ಕಮ್ಯುನಿಷ್ಟ್ ರಾಷ್ಟ್ರ ಚೀನಾ ಸಂಪೂರ್ಣ ಮುಕ್ತವಾಗಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ, ಚೀನಾ ರಾಜಧಾನಿ ಬೀಜಿಂಗ್‍ನಲ್ಲೇ 45 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವ ಸರ್ಕಾರವನ್ನು ಆತಂಕಕ್ಕೆ ದೂಡಿದೆ.
ಬೀಜಿಂಗ್‍ನ ಫೆಂಗ್ಟಾಯ್ ಜಿಲ್ಲೆಯ ಕ್ಸಿನ್‍ಫಾಡಿ ಪ್ರಮುಖ ಹೋಲ್‍ಸೇಲ್ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ 517 ಜನರ ಸ್ವ್ಯಾಬ್ ಟೆಸ್ಟ್ ಮಾಡಲಾಗಿದೆ. ಇವರಲ್ಲಿ 45 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬೀಜಿಂಗ್‍ನ ಫೆಂಗ್ಟಾಯ್ ಜಿಲ್ಲೆಯಲ್ಲಿ ತುರ್ತುಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಜೊತೆಗೆ ಬೀಜಿಂಗ್‍ನಲ್ಲಿ ನಡೆಯಬೇಕಿದ್ದ ಕ್ರೀಡೆ, ಪ್ರವಾಸೋದ್ಯಮ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲು ಚಿಂತನೆ ಎನ್ನಲಾಗಿದೆ. ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಕ್ಸಿನ್‍ಫಾಡಿ ಮಾರುಕಟ್ಟೆಯನ್ನು ಸೀಲ್‍ಡೌನ್ ಮಾಡಲಾಗಿದೆ.
ಚೀನಾದಲ್ಲಿ ಮತ್ತೆ ಕೊರೊನಾ ವೈರಸ್‍ನ 2ನೇ ಅಲೆ ಆರಂಭವಾಗಿದೆಯೇ ಎಂಬ ಪ್ರಶ್ನೆ ಜಗತ್ತನ್ನು ಕಾಡಲಾರಂಭಿಸಿದೆ. ಕೆಲ ದಿನಗಳ ಹಿಂದೆಯೇ ಕ್ಸಿನ್‍ಫಾಡಿ ಮಾರುಕಟ್ಟೆಯ ಗೋಮಾಂಸ ಮಾಗೂ ಮಾಂಸದ ಅಂಗಡಿಗಳನ್ನು ಮುಚ್ಚಿಸಲಾಗಿತ್ತು. ಕಳೆದ ವರ್ಷದ ಡಿಸೆಂಬರ್‍ನಲ್ಲಿ ಚೀನಾದ ವುಹಾನ್ ಪ್ರಾಂತ್ಯದ ಹಸಿ ಮಾರುಕಟ್ಟೆಯಲ್ಲಿ ಕೊರೊನಾ ಸೋಂಕು ಹರಡಿತ್ತು. ಅಲ್ಲಿಂದ ಹರಡಿದ ಕೊರೊನಾ ವೈರಸ್, ಸದ್ಯ 77 ಲಕ್ಷ ಜನರ ದೇಹ ಹೊಕ್ಕಿದೆ. ಕೊರೊನಾ ಮಹಾಮಾರಿಗೆ ಈವರೆಗೆ 4.28ಲಕ್ಷ ಮಂದಿ ಬಲಿಯಾಗಿದ್ದಾರೆ.