ಮಹಾಮಾರಿ ಕೊರೊನಾ ವೈರನ್ ವಿಶ್ವದಾದ್ಯಂತ ಮರಣಮೃದಂಗ ಬಾರಿಸುತ್ತಿದೆ. ದೇಶದಲ್ಲೂ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹೀಗಾಗಿ ದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ರಾಜ್ಯದಲ್ಲೂ ಕೊರೊನಾ ವೈರಸ್ ಹರಡುವ ಆತಂಕವಿರೋ ಹಿನ್ನೆಲೆ ರಾಜ್ಯ ಸರ್ಕಾರ ಸೋಂಕು ತಡೆಗಟ್ಟಲು ಬೇಕಾದ ಕ್ರಮಗಳನ್ನ ಕೈಗೊಳ್ತಿದೆ. ಈ ನಡುವೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಕೊರೊನಾ ಚೆಕಪ್ ಮಾಡಿಸಿಕೊಂಡಿದ್ದಾರೆ.
ಇಂದು ಸಿಎಂ ಬಿ.ಎಸ್ ಯಡಿಯೂರಪ್ಪ, ಡಿಸಿಎಂ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ ಹಾಗೂ ಇನ್ನಿತರ ಕೆಲ ಸಚಿವರು ಯಲಹಂಕದ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅವರೆಲ್ಲಾ ಕೊರೊನಾ ಚೆಕಪ್ ಭಾಗವಾಗಿ ಟೆಂಪರೇಚರ್ ಟೆಸ್ಟ್ ಮಾಡಿಕೊಂಡರು.
ಇನ್ನು ಕೊರೊನಾ ಸೋಂಕು ಹರಡದಂತೆ ತಡೆಯಲು ರಾಜ್ಯದಾದ್ಯಂತ ಒಂದು ವಾರದ ಕಾಲ ಮಾಲ್, ಬಾರ್, ಸಿನಿಮಾ ಹಾಲ್ ಬಂದ್ ಮಾಡುವಂತೆ ಆದೇಶ ಹೊರಡಿಸಲಾಗಿದೆ. ಹಾಗೆ ಶಾಲಾ-ಕಾಲೇಜುಗಳಿಗೆ 15 ದಿನಗಳ ಕಾಲ ರಜೆ ನೀಡಲಾಗಿದೆ.









