ಚಿಕ್ಕಬಳ್ಳಾಪುರ : ರಾಜ್ಯಕ್ಕೆ ಕಂಟಕವಾಗಿರುವ ಮಹಾರಾಷ್ಟ್ರ ನಂಜು ಈಗ ಬರಪೀಡಿತ ಚಿಕ್ಕಬಳ್ಳಾಪುರ ಜಿಲ್ಲೆಗೂ ತಟ್ಟಿದ್ದು, ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ 45 ಮಂದಿಗೆ ಕೋವಿಡ್ ಸೋಂಕಿರುವುದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 71 ಕ್ಕೆ ಏರಿಕೆ ಕಂಡಿದೆ.
ಇಷ್ಟು ದಿನ ತುಸು ನಿರಾಳವಾಗಿದ್ದ ಚಿಕ್ಕಬಳ್ಳಾಪುರ ಜನರು ಇಂದಿನ ಮಹಾ ಸ್ಫೋಟದಿಂದಾಗಿ ಬೆಚ್ಚಿಬಿದ್ದಿದ್ದಾರೆ. ಮಹಾರಾಷ್ಟ್ರದಿಂದ ಆಗಮಿಸಿರುವ 45 ನಾಗರಿಕರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿರುವುದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.
ಇನ್ನು ಲಾಕ್ ಡೌನ್ ಸಡಿಲಿಕೆ ಆದಾಗಿನಿಂದಲೂ ಮಹಾರಾಷ್ಟ್ರದಿಂದ ಬರೋಬ್ಬರಿ 265 ಮಂದಿ ನಾಗರಿಕರು ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದರು. ಇವರ ಪೈಕಿ 45 ಕೋವಿಡ್ ಸೋಂಕು ದೃಢಪಟ್ಟಿದೆ. ಇವರೆಲ್ಲಾ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಿವಾಸಿಗಳೆಂದು ತಿಳಿದು ಬಂದಿದೆ. ಈ ಮೊದಲು ಗೌರಿಬಿದನೂರು ತಾಲೂಕಿನಲ್ಲಿ ಒಟ್ಟು 12 ಮಂದಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು ಎಲ್ಲರೂ ಗುಣಮುಖರಾಗಿದ್ದರು.
ಈವರೆಗೂ ಮಹಾರಾಷ್ಟ್ರದಿಂದ ಆಗಮಿಸಿರುವ ಒಟ್ಟು 265 ಮಂದಿ ನಾಗರಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಈ ಪೈಕಿ 45 ಮಂದಿಯಲ್ಲಿ ಸೋಂಕು ದೃಢಪಟ್ಟು 67 ಮಂದಿಯ ವರದಿ ನೆಗೆಟಿವ್ ಬಂದಿದೆ. ಇನ್ನೂ 153 ಮಂದಿಯ ವರದಿ ಬರಬೇಕಿದೆ.