ಕೊರೊನಾ ಇಂದು ರಾಜ್ಯಕ್ಕೆ `ಕರಾಳ ಶುಕ್ರವಾರ’: ಒಂದೇ ದಿನ 7 ಸಾವು
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ. ಒಂದು ಒಂದೇ ದಿನ 271 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 7 ಮಂದಿಯನ್ನು ಮಹಾಮಾರಿ ಕೊರೊನಾ ಬಲಿ ಪಡೆದುಕೊಂಡಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಇಂದು ನಾಲ್ವರು ಕೊರೊನಾ ಅಟ್ಟಹಾಸಕ್ಕೆ ಉಸಿರು ನಿಲ್ಲಿಸಿದ್ದಾರೆ.
ಬಳ್ಳಾರಿಯಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ 97 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ನಿನ್ನೆಯಷ್ಟೇ ಜಿಂದಾಲ್ ಕಾರ್ಖಾನೆಯ ಸಿಬ್ಬಂದಿಗಳಲ್ಲಿ ಕೊರೊನಾ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜನರಲ್ಲಿ ಸೃಷ್ಟಿಸಿದ್ದ ಆತಂಕ ಇಂದಿನ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ.
ಬೆಂಗಳೂರು ನಗರದಲ್ಲಿ 36 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 617ಕ್ಕೆ ಏರಿಕೆಯಾಗಿದೆ. ಉಡುಪಿಯಲ್ಲಿ 22, ಕಲಬುರಗಿ 20, ಧಾರವಾಡ 19, ದಕ್ಷಿಣಕನ್ನಡ 17, ಬೀದರ್ 10, ಹಾಸನ 9, ಮೈಸೂರು 9, ತುಮಕೂರು 7, ಶಿವಮೊಗ್ಗ ಜಿಲ್ಲೆಗಳಲ್ಲಿ 6 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 6516ಕ್ಕೆ ಏರಿಕೆಯಾಗಿದೆ. ಒಂದು 464 ಮಂದಿ ಆಸ್ಪತ್ರೆಗಳಿಂದ ಡಿಶ್ಚಾರ್ಜ್ ಮಾಡಲಾಗಿದ್ದು, ಒಟ್ಟು ಈವರೆಗೆ 3440 ಮಂದಿ ಚಿಕಿತ್ಸೆ ಬಳಿಕ ಮನೆಗಳಿಗೆ ತೆರಳಿದ್ದಾರೆ.

ಒಂದೇ ದಿನ 7 ಮಂದಿ ಬಲಿ
ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಒಂದೇ ದಿನ ಕೊರೊನಾ ಮಹಾಮಾರಿಗೆ 7 ಮಂದಿ ಬಲಿಯಾಗಿದ್ದಾರೆ. ಬೆಂಗಳೂರು ನಗರದಲ್ಲಿ 49, 60 ಹಾಗೂ 65 ವರ್ಷ ಮೂವರು ಮಹಿಳೆಯನ್ನು ಕೊರೊನಾ ಕ್ರೂರಿಗೆ ತುತ್ತಾಗಿದ್ದಾರೆ. ಜತೆಗೆ 52 ವರ್ಷದ ವ್ಯಕ್ತಿಯೂ ಬಲಿಯಾಗಿದ್ದು, ಸಿಲಿಕಾನ್ ಸಿಟಿ ಜನರ ನಿದ್ದೆಗೆಡಿಸುವಂತೆ ಮಾಡಿದೆ.
ಹಾಸನದಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ಸಾವಿನ ಖಾತೆ ತೆರೆದಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 60 ವರ್ಷದ ವೃದ್ಧ ಹಾಸನ ಕೋವಿಡ್ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ.
ಕಲಬುರಗಿಯಲ್ಲಿ 48, 53 ವರ್ಷದ ಇಬ್ಬರು ವ್ಯಕ್ತಿಗಳು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.








