ಬೆಳಗಾವಿ: ಬ್ರಿಟನ್ ದೇಶದಲ್ಲಿ ಕೊರೊನಾದ ರೂಪಾಂತರ ಹೊಂದಿದ ಸೋಂಕು ಕಂಡು ಬಂದಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಜನತೆಗೆ ಕರೆ ನೀಡಿದ್ದಾರೆ.
ವ್ಯಕ್ತಿಗತ ಸಾಮಾಜಿಕ ಅಂತರವನ್ನು ಸದಾ ಕಾಪಾಡಿಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಬೇಕು. ಆದಷ್ಟು ಜಾಗರೂಕತೆಯಿಂದ ಜೀವನ ನಿರ್ವಹಣೆ ಮಾಡುವಂತೆ ಸಚಿವ ರಮೇಶ್ ಜಾರಕಿಹೊಳಿ ಸೂಚಿಸಿದ್ದಾರೆ.
ಕೋವಿಡ್-19 ಸೋಂಕು ನಿವಾರಕ ಲಸಿಕೆಯು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಲಸಿಕೆಯನ್ನು ಸಹಾ ವ್ಯವಸ್ಥಿತವಾಗಿ ಜನರಿಗೆ ತಲುಪಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ. ಅಲ್ಲಿಯವರೆಗೂ ಜನರು ಮೈಮರೆಯದೇ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು ಎಂದು ಮನವಿ ಮಾಡಿದ್ದಾರೆ.
ಮಾರುಕಟ್ಟೆಗಳಲ್ಲಿ ಸೋಂಕು ಹರಡುವಿಕೆ ತಡೆಗೆ ವ್ಯವಸ್ಥಿತ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು. ಮಳಿಗೆಗಳಲ್ಲಿ ಕಡ್ಡಾಯ 6 ಅಡಿ ಅಂತರ ಕಾಪಾಡಿಕೊಳ್ಳುವಂತೆ ಗ್ರಾಹಕರಿಗೆ ಸೂಚಿಸಬೇಕು. ಪ್ರತಿದಿನ ಮಳಿಗೆಗಳನ್ನು ಸ್ಯಾನಿಟೈಸ್ ಮಾಡಬೇಕು. ಇದನ್ನು ಉಲ್ಲಂಘಿಸುವವರ ವಿರುದ್ಧ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ರಮೇಶ್ ಜಾರಕಿಹೊಳಿ ಸೂಚಿಸಿದ್ದಾರೆ.
ಜನವರಿ 1ರಿಂದ ಶಾಲಾ ಕಾಲೇಜುಗಳು ಪ್ರಾರಂಭವಾಗಲಿದ್ದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿಗಳ ಆರಂಭಕ್ಕೆ ಸರ್ಕಾರ ಸೂಚನೆ ನೀಡಿದ್ದು, ಅದರಂತೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳೂ ಸರ್ಕಾರದ ನಿರ್ದೇಶನದಂತೆ ಕೊಠಡಿಗಳ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಸೋಂಕು ನಿವಾರಕ ಔಷಧಿಗಳನ್ನು ಸಿಂಪಡಿಸಿ ವಿದ್ಯಾರ್ಥಿಗಳ ಮತ್ತು ಪಾಲಕರಲ್ಲಿರುವ ಭಯ ಹೋಗಲಾಡಿಸಬೇಕು. ಇದಕ್ಕಾಗಿ ಪ್ರತಿ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸಲು ತಂಡ ರಚಿಸುವಂತೆ ಬೆಳಗಾವಿ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಸಚಿವ ರಮೇಶ್ ಜಾರಕಿಹೊಳಿ ಆದೇಶಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel