ಕೊರೊನಾವನ್ನು ಔಷಧಿ ಮೂಲಕ ಎದುರಿಸಬೇಕು ಸುಳ್ಳುಗಳಿಂದಲ್ಲ : ಸರ್ಕಾರಕ್ಕೆ ಸಿದ್ದು ಚಾಟಿ
ಬೆಂಗಳೂರು : ಕೊರೊನಾವನ್ನು ಔಷದಿ-ಚಿಕಿತ್ಸೆಯ ಮೂಲಕ ಎದುರಿಸಬೇಕೇ ಹೊರತು ಸುಳ್ಳು-ಮೋಸಗಳ ಫೇಕುಗಿರಿಯಿಂದ ಅಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಕಿಡಿಕಾರಿದ್ದಾರೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಹೊರಡಿಸಿರುವ ಸುತ್ತೋಲೆ ಉಲ್ಲೇಖಿಸಿ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿರುವ ಸಿದ್ದರಾಮಯ್ಯ, ಕೊರೊನಾ ಪರೀಕ್ಷೆ ಕಡಿಮೆಮಾಡಿ, ಸೋಂಕು ಇಳಿಮುಖವಾಗುತ್ತಿದೆ ಎಂಬ ಸುಳ್ಳು ಭರವಸೆಯನ್ನು ಜನರಲ್ಲಿ ಬಿತ್ತುವ ರಾಜ್ಯ ಸರ್ಕಾರದ ನಿರ್ಧಾರ ಕೊಲೆಗಡುಕತನದ್ದು. ಮುಖ್ಯಮಂತ್ರಿ ಮತ್ತು ಸಚಿವ ಡಾ.ಕೆ.ಸುಧಾಕರ್ ಸುಳ್ಳುಗಳಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರ ಈ ಸುತ್ತೋಲೆ ಸಾಕ್ಷಿ.
ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿದೆ ಎಂಬ ಮುಖ್ಯಮಂತ್ರಿ ಅವರ ಸುಳ್ಳು ಪ್ರಚಾರಕ್ಕೆ ಕಾರಣ, ರೋಗ ಲಕ್ಷಣಗಳಿಲ್ಲದವರ ( ಅಸಿಂಪ್ಟಾಮ್ಯಾಟಿಕ್ಸ್) ಸೋಂಕು ಪರೀಕ್ಷೆ ಮಾಡಲೇ ಬಾರದು ಎನ್ನುವ ಬಿಜೆಪಿ ಸರ್ಕಾರದ ಸುತ್ತೋಲೆ ಕಾರಣ. ಇದರಿಂದಾಗುವ ಅಪಾಯ ಗೊತ್ತೇ ಮುಖ್ಯಮಂತ್ರಿಗಳೇ?
ರೋಗ ಲಕ್ಷಣಗಳಿಲ್ಲ ಎನ್ನುವ ಕಾರಣಕ್ಕೆ ಪರೀಕ್ಷೆ ಮಾಡದಿರುವ ಒಬ್ಬ ಸೋಂಕಿತ ವ್ಯಕ್ತಿ ತನ್ನ ಸಂಪರ್ಕಕ್ಕೆ ಬರುವ ನಾಲ್ಕಾರು ಮಂದಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಇದೆ. ಲಾಕ್ ಡೌನ್ ಹೊರತಾಗಿಯೂ ಕೊರೊನಾ ನಿಯಂತ್ರಣಕ್ಕೆ ಬರದೆ ಇರಲು ರಾಜ್ಯ ಬಿಜೆಪಿ ಸರ್ಕಾರದ ಈ ಮೂರ್ಖ ನಿರ್ಧಾರ ಕಾರಣ.
ಮೇ ಮೊದಲ ವಾರದಲ್ಲಿ 49,000ದಷ್ಟಿದ್ದ ಕೊರೊನಾ ಸೋಂಕಿತರ ಸಂಖ್ಯೆ, ಲಾಕ್‍ಡೌನ್ ಹೇರಿದ ಕೆಲವೇ ದಿನಗಳಲ್ಲಿ 38,000ಕ್ಕೆ ಇಳಿಯಿತು ಎಂದು ಮುಖ್ಯಮಂತ್ರಿ ಕೊಚ್ಚಿಕೊಂಡರು. ಆದರೆ, ಏಪ್ರಿಲ್ ಒಂದರಂದು ನಡೆದಿದ್ದ 1,77,560 ಕೊರೊನಾ ಪರೀಕ್ಷೆ, ಮೇ 17ಕ್ಕೆ 97000ಕ್ಕೆ ಕುಸಿದಿರುವುದನ್ನು ಮಾತ್ರ ಅವರು ಹೇಳಿಲ್ಲ.
ಸುಳ್ಳು ಲೆಕ್ಕದಿಂದ ಜನರ ದಾರಿತಪ್ಪಿಸುವ ಕೀಳುಬುದ್ದಿಯನ್ನು ಬಿಟ್ಟು, ತಕ್ಷಣ ಮುಖ್ಯಮಂತ್ರಿ ಅವರು ರೋಗಲಕ್ಷಣಗಳಿಲ್ಲದವರ ಕೊರೊನಾ ಪರೀಕ್ಷೆ ಮಾಡುವ ಅಭಿಯಾನವನ್ನು ಪುನರಾರಂಭಿಸಬೇಕೆಂದು ಒತ್ತಾಯಿಸುತ್ತೇನೆ. ಕೊರೊನಾವನ್ನು ಔಷದಿ-ಚಿಕಿತ್ಸೆಯ ಮೂಲಕ ಎದುರಿಸಬೇಕೇ ಹೊರತು ಸುಳ್ಳು-ಮೋಸಗಳ ಫೇಕುಗಿರಿಯಿಂದ ಅಲ್ಲ ಎಂದು ಬರೆದುಕೊಂಡಿದ್ದಾರೆ.










