ಬೆಂಗಳೂರು : ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಕಳೆದ ಶನಿವಾರ ಬೆಂಗಳೂರಿನ ಹಲವರು ತಮ್ಮ ಊರುಗಳಿಗೆ ತೆರಳುತ್ತಿದ್ದರು. ಈ ವೇಳೆ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ವ್ಯಕ್ತಿಯೊಬ್ಬರು ಹೇಳಿಕೆ ನೀಡಿ ಸರ್ಕಾರವನ್ನು ಟೀಕಿಸಿದ್ದರು. ಬೆಂಗಳೂರು ಮತ್ತು ಬಿಜೆಪಿ ಸರ್ಕಾರದ ಸಹವಾಸ ಸಾಕು, ತಾವು ತಮ್ಮ ಊರಿಗೆ ಹೋಗಿ ಬದುಕುತ್ತೇವೆ, ಕೊರೊನಾ ಪರೀಕ್ಷೆ ಮಾಡಿಸಲು 4000 ರೂಪಾಯಿ ಕೇಳುತ್ತಿದ್ದಾರೆ, ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದೀಗ ಈ ವಿಚಾರವಾಗಿ ಸಚಿವ ಸುಧಾಕರ್ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ‘ಕೊರೊನಾ ವಿರುದ್ಧದ ಈ ಹೋರಾಟದಲ್ಲಿ ನಾವೆಲ್ಲರೂ ಯೋಧರೇ. ಕ್ಷುಲ್ಲಕ ರಾಜಕಾರಣಕ್ಕಾಗಿ ಸುಳ್ಳು ಸುದ್ದಿ ಹರಡುವ, ಇಡೀ ಸಮಾಜ ಒಗ್ಗಟ್ಟಿನಿಂದ ಇರಬೇಕಾದ ಈ ಸಂದರ್ಭದಲ್ಲಿ ಒಡಕು ಮೂಡಿಸಲು ಪ್ರಯತ್ನಿಸುವ, ಹಗಲಿರುಳು ದುಡಿಯುತ್ತಿರುವ ಸರ್ಕಾರ ಮತ್ತು ಕೊರೊನಾ ಯೋಧರಿಗೆ ಮಸಿ ಬಳಿಯುವ ಈ ದುಷ್ಕೃತ್ಯವನ್ನು ಜನ ಎಂದಿಗೂ ಕ್ಷಮಿಸುವುದಿಲ್ಲ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.