ಕೊರೊನಾ ನೀನೆಷ್ಟು ಕ್ರೂರಿ – ಮಗ ಕೊರೊನಾಗೆ ಬಲಿಯಾದ ಸುದ್ದಿ ಕೇಳಿ ಹೆತ್ತವರ ಸಾವು
ಗಂಜಾಂ, ಜುಲೈ 5: ಕೊರೋನವೈರಸ್ ಕಾಯಿಲೆಯಿಂದ ತಮ್ಮ ಏಕೈಕ ಪುತ್ರ ಮರಣ ಹೊಂದಿದ ವಿಚಾರ ತಿಳಿದು ಕೆಲವೇ ಕ್ಷಣಗಳಲ್ಲಿ ಪೋಷಕರು ಮೃತ ಪಟ್ಟ ಹೃದಯವಿದ್ರಾವಕ ಘಟನೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ.
ಗಂಜಾಂ ಜಿಲ್ಲೆಯ ಕಬಿಸುರಿಯಾನಗರ ಪೊಲೀಸ್ ವ್ಯಾಪ್ತಿಯಲ್ಲಿರುವ ನಾರಾಯಣಪುರಸಾನ್ ಗ್ರಾಮದ ರಾಜ್‌ಕಿಶೋರ್ ಸತ್ಪತಿ ,ಅವರ ಪತ್ನಿ ಸುಲೋಚನಾ ಸತ್ಪತಿ ಮತ್ತು ಅವರ 27 ವರ್ಷದ ಶಿಕ್ಷಕ ಮಗ ಮೃತಪಟ್ಟವರು ಎಂದು ಪೊಲೀಸರು ತಿಳಿಸಿದ್ದಾರೆ.

ಈತ ಕೆಲವು ವಾರಗಳ ಕಾಲ ಕ್ವಾರಂಟೈನ್ ಕೇಂದ್ರದಲ್ಲಿ ಇದ್ದು, ಏಕಾಏಕಿ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಈತನನ್ನು ಬುಧವಾರ ಭುವನೇಶ್ವರದ ಕೋವಿಡ್ -19 ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರೋನವೈರಸ್ ಕಾಯಿಲೆಯ ಲಕ್ಷಣಗಳು ಆತನಲ್ಲಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವನ ಸ್ವ್ಯಾಬ್ ಮಾದರಿಯನ್ನು ಪರೀಕ್ಷಿಸಲಾಯಿತು. ಗುರುವಾರ ಆತನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಶುಕ್ರವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಆತ ಮೃತಪಟ್ಟಿದ್ದಾನೆ.
ಆದರೆ ವಿಷಯ ತಿಳಿದ ಆತನ ಪೋಷಕರು ದುಃಖದಿಂದ ಕೆಲವೇ ಸಮಯದಲ್ಲಿ ಅಸುನೀಗಿದ್ದಾರೆ. ಸೋಂಕು ತಮಗೆ ತಗುಲಬಹುದು ಎಂಬ ಆತಂಕದಿಂದ ಗ್ರಾಮಸ್ಥರು ಯಾರೂ ಅವರ ಮೃತದೇಹದ ಬಳಿ ಸುಳಿದಿಲ್ಲಿ. ಬಳಿಕ ಮರಣೋತ್ತರ ಪರೀಕ್ಷೆಗೆ ಜಿಲ್ಲಾಧಿಕಾರಿ ಆದೇಶಿಸಿದ್ದು, ಶನಿವಾರ ಬೆಳಿಗ್ಗೆ ಶವಗಳನ್ನು ಆರೋಗ್ಯ ಅಧಿಕಾರಿಗಳು ಮತ್ತು ಪೊಲೀಸರು ವಶಪಡಿಸಿಕೊಂಡಿದ್ದಾರೆ.








