ಮಹಾರಾಷ್ಟ್ರದ ರಾಜಭವನದ ಕದ ತಟ್ಟಿದ ಕೊರೊನಾ ಸೋಂಕು
ಮುಂಬೈ, ಜುಲೈ 12: ಮಹಾರಾಷ್ಟ್ರದ ರಾಜ ಭವನದ ಕನಿಷ್ಠ 16 ಸಿಬ್ಬಂದಿಗಳಿಗೆ ಕೊರೋನವೈರಸ್ ಸೋಂಕು ತಗಲಿದೆ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (ಬಿಎಂಸಿ) ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಅವರು ಕೋವಿಡ್ -19 ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ನಾಗರಿಕ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟು 16 ಮಂದಿಗೆ ಸೋಂಕು ತಗುಲಿದ್ದು, ಅದರಲ್ಲಿ ಇಬ್ಬರಿಗೆ ಎಂಟು ದಿನಗಳ ಹಿಂದೆ ಸೋಂಕು ಕಾಣಿಸಿಕೊಂಡಿತ್ತು. ಇದರನುಸಾರ ರಾಜಭವನದ ನೂರಕ್ಕೂ ಅಧಿಕ ಸಿಬ್ಬಂದಿಗಳಿಗೆ ಜೆ ಜೆ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಇದೀಗ 14 ಜನರಲ್ಲಿ ಕೊರೊನ ಸೋಂಕಿನ ಲಕ್ಷಣ ಕಂಡು ಬಂದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೀಗ ಸಿಬ್ಬಂದಿ ಕ್ವಾರ್ಟರ್ಸ್ ಮತ್ತು ಗವರ್ನರ್ ಕಚೇರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಮತ್ತು ರಾಜಭವನದ ಸುತ್ತ ನೈರ್ಮಲ್ಯೀಕರಣಗೊಳಿಸಲಾಗುತ್ತಿದೆ. ಸಿಬ್ಬಂದಿ ಸದಸ್ಯರು ಕ್ವಾರಂಟೈನ್ ನಲ್ಲಿರುವ ಕಾರಣ ಎಂಟು ದಿನಗಳ ಕಾಲ ರಾಜ್ಯಪಾಲರ ನಿವಾಸವನ್ನು ಹೊರತುಪಡಿಸಿ ಕಚೇರಿಯನ್ನು ಮುಚ್ಚಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ
ಈಗಾಗಲೇ ಮಹಾರಾಷ್ಟ್ರದಲ್ಲಿ 250000 ಜನರಿಗೆ ಸೋಂಕು ತಗಲಿದ್ದು 10000 ಅಧಿಕ ಜನ ಸಾವನ್ನಪ್ಪಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಂಬೈ ನಗರದಲ್ಲೂ ಸೋಂಕಿತರ ಸಂಖ್ಯೆ ಒಂದು ಲಕ್ಷದ ಸಮೀಪವಿದ್ದು 20000 ಅಧಿಕ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲ ಈಗಾಗಲೇ 5000 ಅಧಿಕ ಜನ ಸಾವನ್ನಪ್ಪಿದ್ದಾರೆ.
ನಿನ್ನೆಯಷ್ಟೇ ಬಚ್ಚನ್ ಫ್ಯಾಮಿಲಿಗೆ ಸೋಂಕು ತಗಲಿದ್ದು ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಟ್ಟಿನಲ್ಲಿ ಮಹಾಮಾರಿ ಕೊರೊನ ದಿನದಿಂದ ದಿನಕ್ಕೆ ಉಲ್ಬಣ ಗೊಳ್ಳುತ್ತಿದು ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತಿರುವ ಹಿನ್ನಲೆಯಲ್ಲಿ ಜನರು ಹೆಚ್ಚಿನ ಮುನ್ನಚ್ಚರಿಕೆ ವಹಿಸಬೇಕಾಗಿದೆ.