ತಿರುಮಲ ತಿರುಪತಿ ದೇವಸ್ಥಾನಂನ ಸಿಬ್ಬಂದಿಗೆ ಕೊರೊನಾ ಸೋಂಕು
ತಿರುಪತಿ, ಜೂನ್ 13: ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ)ಗೆ ಸಂಬಂಧಿಸಿದ ಪುರಾತನ ಶ್ರೀ ಗೋವಿಂದರಾಜ ಸ್ವಾಮಿ ಮಂದಿರದ ಸಿಬ್ಬಂದಿಯೊಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಹಾಗಾಗಿ ತಿರುಪತಿ ವೆಂಕಟೇಶ್ವರ ಮಂದಿರಕ್ಕೆ ಭಕ್ತರ ಪ್ರವೇಶವನ್ನು ಎರಡು ದಿನಗಳ ಕಾಲ ಪುನಃ ನಿರ್ಬಂಧಿಸಲಾಗಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಹೇರಲಾಗಿದ್ದ ನಿರ್ಬಂಧವನ್ನು ಗುರುವಾರದಂದು ತೆರವು ಗೊಳಿಸಿ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ ಭಕ್ತರ ಸಮೂಹವೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಹರಿದು ಬರುತ್ತಿತ್ತು. ಇದೀಗ ಟಿಟಿಡಿಯ ಸಿಬ್ಬಂದಿಯೊಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನಲೆಯಲ್ಲಿ ಮಂದಿರಕ್ಕೆ ಮತ್ತೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಿದ್ದು, ತಿಮ್ಮಪ್ಪನ ದರ್ಶನಕ್ಕೆ ಬಂದಿದ್ದ ಭಕ್ತರು ನಿರಾಸೆ ಅನುಭವಿಸಿದ್ದಾರೆ.
ಟಿಟಿಡಿಯಲ್ಲಿ 7000 ಸಾವಿರ ಶಾಶ್ವತ ಹಾಗೂ 12 ಸಾವಿರಕ್ಕೂ ಹೆಚ್ಚು ಗುತ್ತಿಗೆ ಆಧಾರದ ನೌಕರರು ಇದ್ದು ಅವರಲ್ಲಿ ಒಬ್ಬರಿಗೆ ಕೊರೋನಾ ದೃಢಪಟ್ಟಿದೆ ಎಂದು ಮಾಹಿತಿ ನೀಡಿರುವ ಟಿಟಿಡಿ ಭಾನುವಾರದಿಂದ ಮತ್ತೆ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದಿದೆ.
ಈ ನಡುವೆ ನೌಕರನ ಸಂಪರ್ಕಕ್ಕೆ ಬಂದಿದ್ದ ಎಲ್ಲ ಸಿಬ್ಬಂದಿಗಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಟಿಟಿಡಿ ಹೇಳಿದೆ