ಬೆಳಗಾವಿ: ಜಿಲ್ಲೆಯ ಕೊರೊನಾ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ತುಳುಕುತ್ತಿವೆ. ದಿನದಿಂದ ದಿನಕ್ಕೆ ನೂರಾರು ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಈ ಸಂಖ್ಯೆಗೆ ತಕ್ಕಂತೆ ಆಸ್ಪತ್ರೆ, ಬೆಡ್ ವ್ಯವಸ್ಥೆ ಇಲ್ಲದೆ ರೋಗಿಗಳು ನಿತ್ಯ ಪರದಾಟ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸೇರಿದಂತೆ ಮೂವರು ಸಚಿವರಿದ್ರೂ ಯಾವುದೇ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಸಚಿವರು ತಮ್ಮ ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರ ಸೀಮಿತಗೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಬೆಳಗಾವಿ ಜಿಲ್ಲೆ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದೆ. ªಮಹಾರಾಷ್ಟ್ರದಿಂದ ಬಂದವರಿಂದಲೇ ನೂರಾರು ಸಂಖ್ಯೆಯಲ್ಲಿ ಕೊರೊನಾ ಪಾಸಿಟಿವ್ ಕೇಸ್‍ಗಳು ದಾಖಲಾಗುತ್ತಿವೆ. ದಿನ ನಿತ್ಯ ಬೆಳಗಾವಿ ಜಿಲ್ಲಾಸ್ಪತ್ರೆ ಸೇರಿದಂತೆ ಕೋವಿಡ್ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಇದರಿಂದ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚುತ್ತಿದ್ದು, ಮೇಲಿಂದ ಮೇಲೆ ಯಡವಟ್ಟುಗಳಿಗೆ ಸಾಕ್ಷಿಯಾಗುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಕ್ಷೇತ್ರ ಗೋಕಾಕ್‍ಗೆ ಸೀಮಿತರಾಗಿದ್ದು, ಬೆಳಗಾವಿಯತ್ತ ತಲೆ ಹಾಕಿ ನೋಡುತ್ತಿಲ್ಲ. ಅದೇ ರೀತಿ ಡಿಸಿಎಂ ಲಕ್ಷ್ಮಣ್ ಸವದಿ ಅಥಣಿಗೆ ಸೀಮಿತರಾಗಿದ್ದು, ಬೆಳಗಾವಿಗೂ ತಮಗೂ ಸಂಬಂಧ ಇಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಧಿಕಾರಿಗಳು, ಅಸ್ಪತ್ರೆಗಳ ಮೇಲೆ ಕಂಟ್ರೋಲ್ ಮಾಡೋರು ಯಾರು, ನಿತ್ಯ ಚಿಕಿತ್ಸೆಗಾಗಿ ಪರದಾಡುತ್ತಿರುವ ರೋಗಿಗಳ ಸಮಸ್ಯೆ ಆಲಿಸುವವರು ಯಾರು ಎಂಬ ಪ್ರಶ್ನೆ ಕುಂದಾನಗರಿಯ ಜನರನ್ನು ಕಾಡುತ್ತಿದೆ.
ಕೊರೊನಾ ಸೋಂಕಿತರ ವಾರ್ಡ್‍ಗೆ ಸಾಮಾನ್ಯ ರೋಗಿ ಶಿಫ್ಟ್..!
ಬೆಳಗಾವಿ ಜಿಲ್ಲಾಸ್ಪತ್ರೆ ಬಿಮ್ಸ್‍ನ ಸಿಬ್ಬಂದಿ ಯಡವಟ್ಟುಗಳು ಒಂದಲ್ಲ ಎರಡಲ್ಲ. ಸಾಮಾನ್ಯ ರೋಗಿಯನ್ನು ಕೊರೊನಾ ವಾರ್ಡ್‍ಗೆ ಶಿಫ್ಟ್ ಮಾಡಿ ಯಡವಟ್ಟು ಮಾಡಿರುವ ಘಟನೆ ನಡೆದಿದೆ. ಕೊರೊನಾ ಸೋಂಕಿತ ಮೃತಪಟ್ಟ ಬೆಡ್‍ನ್ನು ಸಾಮಾನ್ಯ ರೋಗಿಗೆ ನೀಡಿದ ಸಿಬ್ಬಂದಿವಿರುದ್ಧ ರೋಗಿಯ ಸಂಬಂಧಿಕರು ವಾಗ್ವಾದ ನಡೆಸುವ ಸ್ಥಿತಿ ಎದುರಾಗಿದೆ.