ಕೊರೊನಾ ಚಿಕಿತ್ಸೆಗೆ ಡಾ. ಗಿರಿಧರ್ ಕಜೆ ಔಷಧ ಪ್ರಯೋಗ ಯಶಸ್ವಿ
ಬೆಂಗಳೂರು, ಜುಲೈ 1: ಕೊರೋನಾ ವೈರಸ್ಗೆ ಡಾ. ಗಿರಿಧರ್ ಕಜೆ ಕಂಡುಹಿಡಿದಿರುವ ಆರ್ಯುವೇದ ಔಷಧ ಪ್ರಯೋಗ ಯಶಸ್ವಿಯಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಜೂನ್ 7ರಿಂದ ಜೂನ್ 25ರ ನಡುವೆ ಈ ವೈದ್ಯಕೀಯ ಪ್ರಯೋಗವನ್ನು ನಡೆಸಲಾಗಿದ್ದು, ಕೊರೋನಾ ಸೋಂಕಿತರಿಗೆ ನೀಡಿದ ಚಿಕಿತ್ಸೆ ಯಶಸ್ವಿಯಾಗಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ 23 ವರ್ಷದಿಂದ 65 ವರ್ಷದವರೆಗಿನ ಕೊರೋನಾ ಸೋಂಕಿತರಿಗೆ ಈ ಚಿಕಿತ್ಸೆ ನೀಡಲಾಗಿದ್ದು, ಕೇವಲ ಎರಡರಿಂದ ನಾಲ್ಕು ದಿನಗಳಲ್ಲಿ ಸೋಂಕಿತರ ಶೀತ, ಕೆಮ್ಮು, ಜ್ವರ, ಸುಸ್ತು, ತಲೆನೋವು, ಉಸಿರಾಟದ ತೊಂದರೆ ಸಂಪೂರ್ಣ ಗುಣಮುಖವಾಗಿದೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲ 3ರಿಂದ 9 ದಿನಗಳಲ್ಲಿ ಕೊರೊನಾ ರೋಗಿಗಳ ಆರ್.ಟಿ ಪಿಸಿಆರ್ ಪರೀಕ್ಷೆಯಲ್ಲಿ ವರದಿ ಕೂಡ ನೆಗೆಟಿವ್ ಎಂದು ಬಂದಿದೆ.
ಹೃದ್ರೋಗ, ಕ್ಷಯ ರೋಗ, ಹೈಪರ್ ಟೆನ್ಷನ್, ಮಧುಮೇಹ ಪೀಡಿತ ರೋಗಿಗಳು ಕೂಡ ಗುಣಮುಖರಾಗಿದ್ದು, ಎಲ್ಲಿಯೂ ಅಡ್ಡ ಪರಿಣಾಮ ಅಥವಾ ಮುಂದಿನ ಹಂತದ ಚಿಕಿತ್ಸೆಗೆ ಹೋಗುವ ಸಂಭವ ಒದಗಿಲ್ಲ.
ಅತಿ ಕಡಿಮೆ ವೆಚ್ಚದಲ್ಲಿ ಕೊರೋನಾ ಸ್ಟಾಂಡರ್ಡ್ ಕೇರ್ನ ಜೊತೆಗೆ ಆರ್ಯುವೇದ ಔಷಧಿಗಳಿಂದ ಚಿಕಿತ್ಸೆ ನೀಡಲಾಗಿದ್ದು, ಈ ವೈದ್ಯಕೀಯ ಔಷಧ ಪ್ರಯೋಗ ಯಶಸ್ವಿಯಾಗಿದೆ.
ಆಯುರ್ವೇದ ವೈದ್ಯ ಗಿರಿಧರ ಕಜೆ ಅವರು 23 ವರ್ಷಗಳಿಂದ ಆಯುರ್ವೇದ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದು, ಕೊರೊನಾ ಚಿಕಿತ್ಸೆಗೆ ಅವರು ಕಂಡು ಹಿಡಿದಿರುವ ಈ ಔಷಧಕ್ಕೆ ಒಬ್ಬ ರೋಗಿಗೆ 90ರಿಂದ 180 ರೂ. ವೆಚ್ಚ ತಗಲುತ್ತದೆ. ತಾವು ಕೊರೊನಾ ಚಿಕಿತ್ಸೆಗೆ ಕಂಡುಹಿಡಿದ ಔಷಧನ್ನು ಪ್ರಯೋಗ ಮಾಡಲು ಅವರು ರಾಜ್ಯ ವೈದ್ಯಕೀಯ ಇಲಾಖೆ ಬಳಿ ಅನುಮತಿ ಪಡೆದಿದ್ದರು.