ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಇಂದು ಒಂದೇ ದಿನ 23 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1079ಕ್ಕೆ ಏರಿಕೆ ಆಗಿದೆ. ಈ ಪೈಕಿ 548 ಸಕ್ರಿಯ ಸೋಂಕು ಪ್ರಕರಣಗಳಾಗಿದ್ದು, 494 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಹೆಮ್ಮಾರಿ ಸೋಂಕಿಗೆ ಈವರೆಗೂ 36 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇಂದು ಬೆಂಗಳೂರು ನಗರದಲ್ಲಿ 14, ಹಾಸನ 3, ಬಾಗಲಕೋಟೆ, ಮಂಡ್ಯ, ಉಡುಪಿ, ಧಾರವಾಡ, ದಾವಣಗೆರೆ ಹಾಗೂ ಬಳ್ಳಾರಿಯಲ್ಲಿ ತಲಾ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.
ಕೊರೊನಾ ಹಾಟ್ ಸ್ಪಾಟ್ ಆಗಿರುವ ಸಿಲಿಕಾನ್ ಸಿಟಿಯ ಶಿವಾಜಿನಗರದಲ್ಲಿ ಇಂದು ಮತ್ತೆ 14 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಹೌಸ್ ಕೀಪಿಂಗ್ ಜೊತೆ ದ್ವಿತೀಯ ಸಂಪರ್ಕದಲ್ಲಿ ಇದ್ದ ವ್ಯಕ್ತಿಗಳಿಗೆ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ 20 ಜನರ ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಇದರಲ್ಲಿ 14 ಮಂದಿಗೆ ಕೊರೊನಾ ಇರುವುದು ದೃಢವಾಗಿದೆ.








