ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ನಿನ್ನೆ 17 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 232ಕ್ಕೆ ಏರಿಕೆಯಾಗಿತ್ತು. ಇದೀಗ ಮತ್ತೆ 15 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯದಲ್ಲಿನ ಕೊರೊನಾ ಸೋಂಕಿತ ಪ್ರಕರಣಗಳ ಕುರಿತಂತೆ ಮಧ್ಯಾಹ್ನದ ಹೆಲ್ತ್ ಬುಲೆಟಿನ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 15 ಜನರಿಗೆ ಕೊರೊನಾ ವೈರಸ್ ಸೋಂಕಿರುವುದಾಗಿ ತಿಳಿಸಿದೆ.
ಧಾರವಾಡದಲ್ಲಿ ನಾಲ್ವರಿಗೆ, ಮಂಡ್ಯದಲ್ಲಿ ಮೂವರಿಗೆ, ಬೆಳಗಾವಿ ಮೂವರಿಗೆ, ಬೀದರ್ ನ ಇಬ್ಬರಿಗೆ, ಬಾಗಲಕೋಟೆಯ ಒಬ್ಬರಿಗೆ, ಬೆಂಗಳೂರು ಗ್ರಾಮಾಂತರ ಒಬ್ಬರಿಗೆ ಹಾಗೂ ಬೆಂಗಳೂರು ನಗರದಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗುಲಿರುವುದಾಗಿ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಇನ್ನೂ ಕೊರೊನಾ ವೈರಸ್ ನಿಂದಾಗಿ ರಾಜ್ಯದಲ್ಲಿ ಈವೆರೆಗೆ 6 ಜನರು ಸಾವನ್ನಪ್ಪಿದ್ದಾರೆ. ಅಲ್ಲದೇ 59 ಜನರು ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.








