ಗೌರಿಬಿದನೂರು ನಗರದ ಮನೆಯಲ್ಲಿ ಸ್ವಯಂ ನಿರ್ಬಂಧ ದಲ್ಲಿದ್ದ ಕೊರೊನಾ ಸೋಂಕು ಶಂಕಿತ ಮಹಿಳೆಯೊಬ್ಬರು ಮೃತ ಪಟ್ಟಿದ್ದಾರೆ.

70 ವರ್ಷ ಪ್ರಾಯದ ಆಂಧ್ರದ ಹಿಂದೂಪುರ ಮೂಲದ ಮಹಿಳೆ ಮೆಕ್ಕಾ ಪ್ರವಾಸದಿಂದ ಮರಳಿದ ನಂತರ ಮಗನ ಮನೆಯಲ್ಲಿ 9 ದಿನಗಳಿಂದ ಕ್ವಾರಂಟೈನ್ ನಲ್ಲಿದ್ದರು.
ರಕ್ತದೊತ್ತಡ, ಹೃದಯದ ಸಮಸ್ಯೆ ಮುಂತಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರಿಗೆ ಮಂಗಳವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ರವಾನಿಸಲಾಗಿತ್ತು. ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ. ಅವರಿಗೆ ಕೊರೋನಾ ಸೋಂಕು ಇರುವುದು ಇನ್ನೂ ದೃಢಪಟ್ಟಿಲ್ಲ. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಅವರ ರಕ್ತದ ಮಾದರಿ ಹಾಗೂ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಿದ್ದು, ವರದಿ ಬಂದ ನಂತರವಷ್ಟೇ ಸಾವಿಗೆ ನಿಜವಾದ ಕಾರಣ ಏನು ಎನ್ನುವುದು ತಿಳಿದು ಬರಲು ಸಾಧ್ಯ.








