ಸೋಂಕಿತನ ಮೃತದೇಹದಿಂದ ಕೊರೊನಾ ವೈರಸ್ ಹರಡುವುದಿಲ್ಲ – ಯು.ಟಿ ಖಾದರ್
ಮಂಗಳೂರು, ಜೂನ್ 24: ಕೊರೊನಾ ಸೋಂಕಿತನ ಅಂತ್ಯಸಂಸ್ಕಾರದಲ್ಲಿ ಪಿಪಿಐ ಕಿಟ್ ಅನ್ನು ಧರಿಸದೆ ಭಾಗಿಯಾದ ಹಿನ್ನಲೆಯಲ್ಲಿ ಮಾಜಿ ಸಚಿವ ಯು.ಟಿ ಖಾದರ್ ಅವರು ಪ್ರತಿಕ್ರಿಯೆ ನೀಡಿದ್ದು, ಸೋಂಕಿತನ ಮೃತದೇಹದಿಂದ ಕೊರೊನಾ ವೈರಸ್ ಹರಡುವುದಿಲ್ಲ, ಹಾಗಾಗಿ ಪಿಪಿಐ ಕಿಟ್ ಧರಿಸದೆ ಭಾಗಿಯಾಗಿದ್ದೇನೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರಿನ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಸೋಂಕಿತನ ಮೃತದೇಹದಿಂದ ಕೊರೊನಾ ವೈರಸ್ ಹರಡುವುದಿಲ್ಲ. ವೈದ್ಯಕೀಯ ಅಧ್ಯಯನ ಮೃತ ದೇಹದಿಂದ ವೈರಸ್ ಹರಡುತ್ತದೆ ಎಂದು ಹೇಳಿಲ್ಲ. ಹಾಗಾಗಿ ಪಿಪಿಐ ಕಿಟ್ ಧರಿಸುವ ಅಗತ್ಯವಿಲ್ಲ. ಜನ ಅದೆಷ್ಟು ಭಯಭೀತರಾಗಿದ್ದಾರೆ ಎಂದರೆ ತಂದೆಯ ಹೆಣವನ್ನು ಮಕ್ಕಳು ನೋಡಲು ಬರುತ್ತಿಲ್ಲ, ಧಾರ್ಮಿಕ ವಿಧಿವಿಧಾನ ಮಾಡುವುದಕ್ಕೂ ಜನಭಯಭೀತರಾಗಿದ್ದಾರೆ. ಕಾನೂನು ಪ್ರಕಾರ ಪಿಪಿಇ ಕಿಟ್ ಧರಿಸದೇ ಇರುವುದು ತಪ್ಪು. ಆದರೆ ಜನರಿಗೆ ಈ ವಿಚಾರವನ್ನು ಮನದಟ್ಟು ಮಾಡಲು ನಾನು ಪಿಪಿಇ ಕಿಟ್ ಧರಿಸಿರಲಿಲ್ಲ. ಧಾರ್ಮಿಕ ವಿಧಿ-ವಿಧಾನಗಳ ಪ್ರಕಾರ ಜನರು ಅಂತ್ಯಕ್ರಿಯೆ ಮಾಡಬಹುದಾಗಿದೆ ಎಂದು ಯು.ಟಿ ಖಾದರ್ ಹೇಳಿದರು.
ಮುಂದಿನ ಮೂರು ತಿಂಗಳು ಬಹಳ ಕಠಿಣ ಸವಾಲಿನ ತಿಂಗಳಾಗಿದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತ ವ್ಯವಸ್ಥೆ ಯಲ್ಲಿ ಬದಲಾವಣೆ ಮಾಡಬೇಕಾಗಿದೆ. ಎಲ್ಲಾ ಅಂಗಡಿಗಳನ್ನು ತೆರೆಯದೇ, ಅಗತ್ಯ ಅಂಗಡಿಗಳನ್ನು ಮಾತ್ರ ಜನರಿಗೆ ತೆರೆಯಬೇಕು ಮತ್ತು ಈ ಬಗ್ಗೆ ಜಿಲ್ಲಾಡಳಿತ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.