ಚೀನಾದಲ್ಲಿ ದಾಳಿ ಇಟ್ಟಿರುವ ಕೊರೋನಾ ವೈರಸ್ ನ ಪರಿಣಾಮ ವಿಶ್ವದ ವ್ಯಾಪಾರ ವಹಿವಾಟು, ಪ್ರವಾಸ, ವಿಮಾನಯಾನ, ಕಚ್ಚಾ ತೈಲ ದರ ಹೀಗೆ ಎಲ್ಲದರ ಮೇಲೂ ಬೀರಿದೆ. ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಕಾರು ತಯಾರಿಕಾ ಕಂಪೆನಿ ಹ್ಯುಂಡೈ ತನ್ನ ಅತಿ ದೊಡ್ಡ ಕಾರು ತಯಾರಿಕಾ ಘಟಕದ ಕಾರ್ಯಚರಣೆ ಸ್ಥಗಿತಗೊಳಿಸಿದ್ದರೆ, ಕಾರಿನ ಬಿಡಿಭಾಗಗಳ ಕೊರತೆಯಿಂದ ಐದು ಘಟಕಗಳನ್ನು ಸ್ಥಗಿತಗೊಳಿಸಿದೆ.
ಹ್ಯುಂಡೈ ಜತೆಗೆ ರೆನಾಲ್ಟ್ ನ ದಕ್ಷಿಣ ಕೊರಿಯಾದ ಬುಸಾನ್ ನ ಘಟಕ, ಫಿಯಟ್ ಕ್ರೈಸ್ಲರ್ ಆಟೋಮೊಬೈಲ್ಸ್ ನ ಯುರೋಪಿಯನ್ ಕಾರ್ಖಾನೆಯನ್ನು ಕೂಡ ಮುಚ್ಚುವ ಸಾಧ್ಯತೆ ಇದೆ ಎಂದು ಕಂಪನಿಯ ಸಿಇಒ ಹೇಳಿದ್ದಾರೆ.
ಚೀನಾದಿಂದ ಉಪಕರಣಗಳ ಅಮದಿಗೆ ತೊಡಕಾಗಿರುವುದರಿಂದ ಹಲವು ಕಾರ್ಖಾನೆಗಳು ತಮ್ಮ ಕಾರ್ಯ ಸ್ಥಗಿತಗೊಳಿಸಿದೆ. ಇವೆಲ್ಲದರ ನೇರ ಪರಿಣಾಮ ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದೆ.
ಭಾರತದ ಆಟೊ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ಉಪಕರಣ ತಯಾರಿ ವಲಯದ ಮೇಲೂ ಕೊರೊನಾವೈರಸ್ ಪರಿಣಾಮ ಬೀರಿದೆ. ಭಾರತದ ಷೇರುಪೇಟೆ ಇಳಿಕೆಯ ಹಾದಿ ಹಿಡಿದಿದ್ದರೆ, ವಾಹನಗಳ ಮಾರಾಟ ಪ್ರಮಾಣ ಜನವರಿಯಲ್ಲಿ ಶೇ 6.2ರಷ್ಟು ಕುಸಿದಿರುವುದಾಗಿ ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ (ಎಸ್ಐಎಎಂ) ತಿಳಿಸಿದೆ.