ಬೆಂಗಳೂರು: ಇರಾನ್ ಬದಲಿಗೆ ಭಾರತವು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಈಗ ಭಾರತೀಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸರ್ಕಾರದ ಮೌನವನ್ನು ಪ್ರಶ್ನಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಭಾರತದ ವಿದೇಶಾಂಗ ನೀತಿ ಮತ್ತು ವಾಣಿಜ್ಯ ಒಪ್ಪಂದಗಳ ಕುರಿತು ಸ್ವತಃ ಭಾರತ ಸರ್ಕಾರ ಘೋಷಣೆ ಮಾಡುವ ಮುನ್ನವೇ ಅಮೆರಿಕದ ಅಧ್ಯಕ್ಷರು ಮಾಹಿತಿ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತದ ಮಹತ್ವದ ನಿರ್ಧಾರಗಳನ್ನು ಅನ್ಯ ದೇಶದ ನಾಯಕರು ಪ್ರಕಟಿಸುತ್ತಿದ್ದಾರೆ ಎಂದರೆ, ಮುಂದಿನ ದಿನಗಳಲ್ಲಿ ನಮ್ಮ ದೇಶದ ಆಡಳಿತ ವ್ಯವಸ್ಥೆ ಹೇಗಿರಬಹುದು ಎಂದು ವ್ಯಂಗ್ಯವಾಡಿದ್ದಾರೆ. ಮುಂದೇನು, ಅಮೆರಿಕದ ಅಧ್ಯಕ್ಷರು ಭಾರತದ ಬಜೆಟ್ ಅನ್ನು ಸಹ ಮಂಡಿಸುತ್ತಾರೆಯೇ ಎಂದು ಖಾರವಾಗಿ ಪ್ರಶ್ನಿಸುವ ಮೂಲಕ ಕೇಂದ್ರದ ನಡೆಗೆ ಚಾಟಿ ಬೀಸಿದ್ದಾರೆ.
ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ನ್ಯೂಯಾರ್ಕ್ನಲ್ಲಿ ಏರ್ ಫೋರ್ಸ್ ಒನ್ ವಿಮಾನದಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದ ಡೊನಾಲ್ಡ್ ಟ್ರಂಪ್, ಜಾಗತಿಕ ತೈಲ ಮಾರುಕಟ್ಟೆಯ ಬಗ್ಗೆ ಮಾತನಾಡುತ್ತಾ ಭಾರತದ ಪ್ರಸ್ತಾಪ ಮಾಡಿದ್ದರು. ತೈಲ ಖರೀದಿಗೆ ನಾವು ಚೀನಾವನ್ನು ಸ್ವಾಗತಿಸುತ್ತೇವೆ. ಅದರಿಂದ ಹೆಚ್ಚಿನ ಲಾಭ ಗಳಿಸಬಹುದು. ನಾವು ಈಗಾಗಲೇ ಒಪ್ಪಂದವನ್ನು ಮಾಡಿಕೊಂಡಿದ್ದೇವೆ. ಭಾರತ ಕೂಡ ಈ ನಿಟ್ಟಿನಲ್ಲಿ ಬರುತ್ತಿದೆ. ಭಾರತವು ಇನ್ಮುಂದೆ ಇರಾನ್ ಬದಲು ವೆನೆಜುವೆಲಾದಿಂದ ತೈಲವನ್ನು ಖರೀದಿಸಲಿದೆ. ಆದ್ದರಿಂದ ನಾವು ಈಗಾಗಲೇ ಒಪ್ಪಂದವನ್ನು ಮಾಡಿಕೊಂಡಿದ್ದೇವೆ ಎಂದು ಟ್ರಂಪ್ ಹೇಳಿಕೆ ನೀಡಿದ್ದರು.
ಕೇಂದ್ರದ ಮೌನ
ಟ್ರಂಪ್ ಅವರ ಈ ಮಹತ್ವದ ಹೇಳಿಕೆ ಹೊರಬಿದ್ದರೂ, ಭಾರತದ ಕೇಂದ್ರ ಸರ್ಕಾರದಿಂದ ಅಥವಾ ವಿದೇಶಾಂಗ ಸಚಿವಾಲಯದಿಂದ ಈವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಅಥವಾ ಸ್ಪಷ್ಟನೆ ಹೊರಬಂದಿಲ್ಲ. ಈ ಮೌನವನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.
ನಮ್ಮ ಸರ್ಕಾರ ಏನೇ ಮಾಡಿದರೂ, ಯಾವುದೇ ಒಪ್ಪಂದ ಮಾಡಿಕೊಂಡರೂ ಅದರ ಮಾಹಿತಿಯನ್ನು ಭಾರತೀಯರಿಗೆ ತಿಳಿಸುವ ಮೊದಲೇ ಅಮೆರಿಕದ ಸರ್ಕಾರವು ಮಾಹಿತಿ ನೀಡುತ್ತಿದೆ. ಇದು ಭಾರತದ ಸಾರ್ವಭೌಮತ್ವ ಮತ್ತು ಸ್ವತಂತ್ರ ವಿದೇಶಾಂಗ ನೀತಿಯ ಪ್ರಶ್ನೆಯಾಗಿದೆ ಎಂದು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಭಾರತದ ನಿರ್ಧಾರಗಳನ್ನು ವಾಷಿಂಗ್ಟನ್ ನಲ್ಲಿ ಪ್ರಕಟವಾಗುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಿರೋಧ ಪಕ್ಷಗಳು ಕೇಂದ್ರದ ವಿರುದ್ಧ ಕಿಡಿಕಾರಿವೆ.








