ಬೆಂಗಳೂರಲ್ಲಿ ಮತ್ತೆ ಮೂರು ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದೆ. ನಿನ್ನೆ ಓರ್ವ ಟೆಕ್ಕಿ ಕೊರೊನಾಗೆ ತುತ್ತಾಗಿರುವುದು ತಿಳಿದುಬಂದಿತ್ತು. ಇದೀಗ ಟೆಕ್ಕಿಯ ಕುಟುಂಬದ ಉಳಿದವರಿಗೂ ಸೋಂಕು ತಗುಲಿದೆ. ಟೆಕ್ಕಿ ಪತ್ನಿ, ಮಗಳು, ಹಾಗೂ ಸಹೋದ್ಯೋಗಿಗೆ ಕೊರೊನಾ ಸೋಂಕು ತಗುಲಿದೆ. ನಗರದಲ್ಲಿ ಈವರೆಗೆ ನಾಲ್ವರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿರುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.
“ಕರ್ನಾಟಕದಲ್ಲಿ ಇದುವರೆಗೆ 4 ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರನ್ನು ಹಾಗೂ ಅವರ ಕುಟುಂಬ ಸದಸ್ಯರನ್ನು ಪ್ರತ್ಯೇಕವಾಗಿರಿಸಿ ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ನಾಗರಿಕರು ಮುಂಜಾಗೃತ ಕ್ರಮ ವಹಿಸಿ ಸೋಂಕು ಹರಡದಂತೆ ಸಹಕರಿಸಬೇಕು ಎಂದು ಕೋರುತ್ತೇನೆ” ಎಂದು ರಾಮುಲು ಟ್ವೀಟ್ ಮಾಡಿದ್ದಾರೆ.
ಇನ್ನು ಇದೇ ವಿಚಾರವಾಗಿ ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಇಲಾಖೆಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸುವುದಾಗಿ ತಿಳಿದು ಬಂದಿದೆ.