ಉಪ್ಪಿನಂಗಡಿ ಯುವಕನಿಗೆ ಕೊರೊನಾ ಸೋಂಕು- 3 ಮನೆಗಳು ಸೀಲ್ ಡೌನ್ ಸಾಧ್ಯತೆ
ಉಪ್ಪಿನಂಗಡಿ, ಜೂನ್ 17: ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯ ಹಿರೇಬಂಡಾಡಿ ಗ್ರಾಮದ ಕೊಳ್ಳೇಜಾಲ್ ನಿವಾಸಿಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕಂದಾಯ ಇಲಾಖೆ, ಪೊಲೀಸ್, ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು, ಯುವಕನ ಮನೆ ಮತ್ತು ಇತರ 2 ಪ್ರಾಥಮಿಕ ಸಂಪರ್ಕ ಹೊಂದಿರುವ ಮನೆ ಸೇರಿದಂತೆ 3 ಮನೆಗಳನ್ನು ಸೀಲ್ಡೌನ್ ಮಾಡುವ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.
24 ವರ್ಷ ಪ್ರಾಯದ ಕೊಳ್ಳೇಜಾಲ್ ನಿವಾಸಿ ಯುವಕನಿಗೆ ಕೆಲವು ದಿನಗಳ ಹಿಂದೆ ಮೆದುಳು ಜ್ವರ ಕಾಣಿಸಿಕೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ಮನೆಗೆ ಬಂದಿದ್ದರು ಎಂದು ಹೇಳಲಾಗಿದೆ. 5 ದಿನಗಳ ಬಳಿಕ ಪುನಃ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪುತ್ತೂರು ಆಸ್ಪತ್ರೆಗೆ ತೆರಳಿದ್ದರು. ಅಲ್ಲಿಂದ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಗಂಟಲು ದ್ರವ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದೆ. ಇಂದು ಅವರ ಕೊರೋನಾ ಪರೀಕ್ಷಾ ವರದಿ ಬಂದಿದ್ದು, ಕೊರೊನಾ ಸೋಂಕು ದೃಢಪಟ್ಟಿದೆ.
ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 370ಕ್ಕೆ ಏರಿಕೆಯಾಗಿದೆ.