ವಿಶ್ವವನ್ನೇ ಕಾಡಿರುವ ಕೊರೊನಾ ಸೋಂಕು ಈಗ ಕ್ರಿಕೆಟ್ ಅಂಗಣಕ್ಕೆ ಕಾಲಿಟ್ಟಿದೆ. ಪಾಕಿಸ್ಥಾನದ ಮಾಜಿ ಆರಂಭಕಾರ ತೌಫಿಕ್ ಉಮರ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ತಮಗೆ ಕೊರೊನಾ ಸೋಂಕು ತಗುಲಿರುವುದರ ಬಗ್ಗೆ ತೌಫಿಕ್ ಉಮರ್ ಅವರು ಪಾಕಿಸ್ತಾನದ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ತಾನು ಮನೆಯಲ್ಲಿ ‘ಸೆಲ್ಫ್ ಐಸೊಲೇಶನ್’ ನಲ್ಲಿದ್ದಾಗ ಅನಾರೋಗ್ಯದ ಸೂಚನೆ ಲಭಿಸಿತು. ಹಾಗಾಗಿ ನಾನು ಕೊರೊನಾ ಪರೀಕ್ಷೆಗೆ ಒಳಗಾದೆ ಮತ್ತು ಪರೀಕ್ಷಾ ವರದಿ ನನಗೆ ಕೊರೊನಾ ಸೋಂಕು ತಗುಲಿರುವುದನ್ನು ದೃಢಪಡಿಸಿತು ಎಂದು ಹೇಳಿದ್ದಾರೆ.
ತೌಫಿಕ್ ಉಮರ್ ಕೊರೊನಾ ವೈರಸ್ ಸೋಂಕಿಗೆ ಒಳಗಾದ ನಾಲ್ಕನೇ ಕ್ರಿಕೆಟ್ ಆಟಗಾರ ಹಾಗೂ ಪಾಕಿಸ್ಥಾನದ ಎರಡನೇ ಕ್ರಿಕೆಟಿಗ.ಈ ಮೊದಲು ಸ್ಕಾಟ್ಲೆಂಡ್ ಸ್ಪಿನ್ನರ್ ಮಜೀದ್ ಹಕ್ ಮತ್ತು ದಕ್ಷಿಣ ಆಫ್ರಿಕಾದ ಪ್ರಥಮ ದರ್ಜೆ ಕ್ರಿಕೆಟಿಗ ಸೊಲೊ ಎನ್‌ಕ್ವೆನಿ ಅವರು ಕೊರೊನಾ ವಿರುದ್ಧ ಸೆಣಸಿ ಸೋಂಕಿನಿಂದ ಗುಣಮುಖರಾಗಿದ್ದರೆ, ಪಾಕಿಸ್ತಾನದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಜಾಫರ್ ಸಫರಾಜ್ (50) ಅವರನ್ನು ಕೊರೊನಾ ಸೋಂಕು ಬಲಿ ತೆಗೆದು ಕೊಂಡಿತ್ತು. ತೌಫಿಕ್ ಉಮರ್ 2000ದ ಆರಂಭದಲ್ಲಿ ಅಂತಾ ರಾಷ್ಟ್ರೀಯ ಕ್ರಿಕೆಟನ್ನು ಪ್ರವೇಶಿಸಿದ್ದರು ಮತ್ತು 2003ರ ಪಾಕಿಸ್ಥಾನ ವಿಶ್ವಕಪ್ ತಂಡವನ್ನೂ ಪ್ರತಿನಿಧಿಸಿದ್ದರು.








