ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ದೇಶದಲ್ಲಿ ತೀವ್ರವಾಗಿ ಹರಡುತ್ತಿದ್ದು, ಗುಜರಾತ್ ನಲ್ಲಿ ಮತ್ತೆ ಹೊಸದಾಗಿ 11 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ ದೇಶಾದ್ಯಂತ 422ಕ್ಕೆ ಏರಿಕೆಯಾಗಿದೆ.
ಮತ್ತೊಂದೆಡೆ ದೇಶದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಮುಂಬೈನಲ್ಲಿ ಮತ್ತೊಬ್ಬ ವ್ಯಕ್ತಿಯೊಬ್ಬರು ಕೊರೊನಾಸುರನಿಗೆ ಬಲಿಯಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫಿಲಿಪ್ಪೀನ್ಸ್ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಭಾನುವಾರದ ಜನತಾ ಕರ್ಫ್ಯೂ ನಂತರ ಈಗ ದೇಶಾದ್ಯಂತ ಸೋಂಕಿತ ಜಿಲ್ಲೆಗಳಲ್ಲಿ ಲಾಕ್ ಡೌನ್ ಮಾಡಲಾಗಿದೆ. ಆದರೆ ಲಾಕ್ ಡೌನ್ ಅನ್ನು ಜನ ಗಂಭೀರವಾಗಿ ಪರಿಗಣಿಸುತ್ತಿಲ್ಲ. ದೇಶಾದ್ಯಂತ 75 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲಾಗಿದೆ.









