ಹೊಸದಿಲ್ಲಿ, ಮೇ 27 : ಕೊರೋನಾ ಸೋಂಕಿಗೆ ಕಡಿವಾಣ ಹಾಕಲು ವಿಶ್ವದಾದ್ಯಂತ ಎಲ್ಲಾ ರಾಷ್ಟ್ರಗಳು ಹೆಣಗಾಡುತ್ತಿವೆ. ಕೊರೋನಾ ಸೋಂಕು ತಡೆಗಟ್ಟುವ ಔಷಧಿ, ಲಸಿಕೆ ಕಂಡು ಹಿಡಿಯಲು ಲಂಡನ್, ಇಸ್ರೇಲ್, ಇಟಲಿ, ಅಮೇರಿಕಾ, ಚೀನಾ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳ ವಿಜ್ಞಾನಿಗಳು ಪ್ರಯೋಗಗಳನ್ನು ನಡೆಸುತ್ತಿದ್ದಾರೆ.
ಕೊರೋನಾ ಸೋಂಕಿಗೆ ಔಷಧಿ ಅಥವಾ ಲಸಿಕೆ ಅಭಿವೃದ್ಧಿ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದ್ದು, ಹಾಂಗ್ಕಾಂಗ್ನ ಕ್ಯಾನ್ಸಿನೋ ಬಯೋಲಾಜಿಕಲ್ ಸಂಸ್ಥೆ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಯು ಕ್ಲಿನಿಕಲ್ ಟ್ರಯಲ್ ಪ್ರಕ್ರಿಯೆ ನಡೆಸುತ್ತಿದೆ. ಬೀಜಿಂಗ್ ಇನ್ಸ್ಟಿಟ್ಯೂಟ್ ಆಫ್ ಬಯೋಟೆಕ್ನಾಲಜಿಯ ಲಸಿಕೆ ಅಭಿವೃದ್ಧಿಯು 2ನೇ ಹಂತದಲ್ಲಿದೆ. ಅಮೆರಿಕದ ಔಷಧ ತಯಾರಿಕಾ ಸಂಸ್ಥೆ ಮಾಡೆರ್ನಾ ಕಂಪನಿ ಮತ್ತು ಇನೋವಿಯೋ ಫಾರ್ಮಾಸಿಟಿಕಲ್ಸ್ ಕಂಪನಿಯು ಅಭಿವೃದ್ಧಿಗೊಳಿಸಿದ ಲಸಿಕೆಗಳನ್ನು ಮನುಷ್ಯರಿಗೆ ನೀಡಿ ಪ್ರಯೋಗ ಪ್ರಾರಂಭಿಸಿದೆ.
ಯು.ಎಸ್ ನ ಬಯೋಟೆಕ್ನಾಲಜಿ ಕಂಪನಿಯೊಂದು ಕೊರೊನಾ ಸೋಂಕಿಗೆ, ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದು ಇದೀಗ ಮನುಷ್ಯರ ಮೇಲೆ ಪ್ರಯೋಗಿಸುತ್ತಿದೆ. ಲಸಿಕೆ ಪರಿಣಾಮಕಾರಿ ಎಂದು ಕಂಡು ಬಂದರೆ ಈ ವರ್ಷದೊಳಗೆ ಮಾರುಕಟ್ಟೆಗೆ ಬರಲಿದೆ. ಯು.ಎಸ್.ಬಯೋಟೆಕ್ನಾಲಜಿ ಕಂಪನಿ ‘ನೋವಾವ್ಯಾಕ್ಸ್’ ಕೋವಿಡ್-19 ಲಸಿಕೆಯನ್ನು ಆಸ್ಟ್ರೇಲಿಯಾದ ಮೆಲ್ಬರ್ನ್ ಮತ್ತು ಬ್ರಿಸ್ಬೇನ್ ನಲ್ಲಿ 131 ಜನರ ಮೇಲೆ ಪ್ರಯೋಗಿಸುವ ಮೂಲಕ ಮೊದಲ ಹಂತದ ಕ್ಲಿನಿಕಲ್ ಟ್ರಯಲ್ ಪ್ರಾರಂಭಿಸಿದೆ.
ನೋವಾವ್ಯಾಕ್ಸ್ ಕಂಪನಿಯ ಸಂಶೋಧನಾ ಮುಖ್ಯಸ್ಥ ಡಾ.ಗ್ರೆಗೊರಿ ಗ್ಲೆನ್, ಈಗಾಗಲೇ ಡೋಸೇಜ್ ಗಳನ್ನು ನಾವು ತಯಾರಿಸುತ್ತಿದ್ದು, ಈ ವರ್ಷದ ಕೊನೆಯಲ್ಲಿ ಲಸಿಕೆ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ. ಕೊರೋನಾ ವೈರಾಣು ವಿನ ಮೇಲ್ಮೈ ನಲ್ಲಿ ಇರುವ ಸ್ಪೈಕ್ ಎಂಬ ಪ್ರೋಟೀನ್ ನನ್ನು ಗುರುತಿಸಿ ದೇಹದ ಪ್ರತಿರೋಧಕ ವ್ಯವಸ್ಥೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಲಸಿಕೆ ತಯಾರಿಸಲಾಗಿದೆ. ಇತರ ಕೆಲವು ಲಸಿಕೆಗಳನ್ನು ಕೊಲ್ಲಲ್ಪಟ್ಟ ವೈರಸ್ ನಿಂದ ತಯಾರಿಸಲಾಗಿದೆ.








