ಲಂಡನ್ : ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಆರ್ಭಟಕ್ಕೆ ಕಡಿವಾಣ ಹಾಕಲು ವಿಶ್ವದ ಅನೇಕ ದೇಶಗಳು, ಔಷಧಿ ಕಂಡು ಹಿಡಿಯುವ ಪ್ರಯತ್ನದಲ್ಲಿವೆ. ಈ ಮಧ್ಯೆ ಆಕ್ಸಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಪ್ರಯೋಗ ಯಶಸ್ವಿಯಾಗಿದ್ದು ಕೊರೊನಾ ಲಸಿಕೆ ಭರವಸೆ ಮೂಡಿಸಿದೆ. ಅಕ್ಸಫರ್ಡ್ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಲಸಿಕೆ ಕೋತಿಗಳ ಮೇಲಿನ ಪ್ರಯೋಗ ಯಶಸ್ವಿಯಾಗಿದೆ ಎಂದು ಸಂಶೋಧಕ ಡಾ. ಪೆನ್ನಿವಾರ್ಡ್ ತಿಳಿಸಿದ್ದಾರೆ.
ಕೊರೊನಾ ವೈರಾಣು ನಿಯಂತ್ರಣದ ಲಸಿಕೆಯನ್ನು ಸಂಶೋಧನೆಯ ಭಾಗವಾಗಿ ಮಂಗಗಳ ಮೇಲೆ ಪ್ರಯೋಗಿಸಲಾಗಿದೆ. ಪ್ರಯೋಗದಲ್ಲಿ ವೈರಾಣು ನಿಯಂತ್ರಣ ಲಕ್ಷಣಗಳು ಕಂಡುಬಂದಿವೆ. ಏಷ್ಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕಂಡುಬರುವ ಮಕಾಕಾ ಪ್ರಭೇದದ ಮಂಗಗಳ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಲಾಗಿದೆ.
6 ಮಂಗಗಳ ಮೇಲೆ ಲಸಿಕೆ ಪ್ರಯೋಗಿಸಿದ್ದು ಮಂಗಗಳ ಉಸಿರಾಟ, ಶ್ವಾಸಕೋಶ, ನ್ಯುಮೋನಿಯಾ ಲಕ್ಷಣಗಳನ್ನು ಪರಿಶೀಲಿಸಿದಾಗ ಮಂಗಗಳಲ್ಲಿ ರೋಗನಿರೋಧಕ ಶಕ್ತಿ ಕಂಡು ಬಂದಿದೆ. ಈ ಪ್ರಯೋಗ ಯಶಸ್ವಿಯಾಗಿದ್ದು ಮುಂದಿನ ಹಂತದಲ್ಲಿ ಮನುಷ್ಯರ ಮೇಲೆ ಪ್ರಯೋಗ ಮಾಡಲಾಗುವುದು. ಫಲಿತಾಂಶದ ಬಳಿಕ ಪ್ರಯೋಗ ಸಂಪೂರ್ಣ ಯಶಸ್ವಿಯಾಗುವ ನಿರೀಕ್ಷೆ ಇದೆ ಎಂದು ವೈದ್ಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.








