2022ಕ್ಕೆ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಮುಂದೂಡಲು ಐಸಿಸಿ ಚಿಂತನೆ ? ಈ ವರ್ಷದ ಅಕ್ಟೋಬರ್‍ನಲ್ಲಿ ನಡೆಯಬೇಕಿದ್ದ ಟಿ-ಟ್ವೆಂಟಿ ವಿಶ್ವಕಪ್.
ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ 2020ರ ಟಿ-ಟ್ವೆಂಟಿ ವಿಶ್ವಕಪ್‍ಗೆ ಕೊರೋನಾ ವೈರಸ್ ಅಡ್ಡಿಯನ್ನುಂಟು ಮಾಡಿದೆ. ಹೀಗಾಗಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಮುಂದೂಡಲು ಚಿಂತನೆ ನಡೆಸುತ್ತಿದೆ. ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಆಸ್ಟ್ರೇಲಿಯಾದಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಗೆ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿತ್ತು. ಆದ್ರೆ ಮಹಾಮಾರಿ ಕೊರೋನಾದಿಂದಾಗಿ ಇದೀಗ ಐಸಿಸಿ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಿದೆ.
ಮೇ 28ರಂದು ಐಸಿಸಿ ಮಹತ್ವದ ಸಭೆಯನ್ನು ನಡೆಸಲಿದೆ. ಬಹುಷಃ ಈ ಸಭೆಯಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಯಾವಾಗ ಸಂಘಟಿಸಬೇಕು ಎಂಬುದನ್ನು ನಿರ್ಧಾರ ಮಾಡಲಾಗುವುದು. ಒಂದು ಮೂಲಗಳ ಪ್ರಕಾರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು 2022ಕ್ಕೆ ಮುಂದೂಡುವ ಯೋಚನೆಯಲ್ಲಿದೆ ಐಸಿಸಿ. ಯಾಕಂದ್ರೆ ಮುಂದಿನ ವರ್ಷ ಅಂದ್ರೆ 2021ರಲ್ಲಿ ಮಹಿಳಾ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯಲಿದೆ. ಆದ್ರಿಂದ ಒಂದೇ ವರ್ಷ ಎರಡು ವಿಶ್ವಕಪ್ ಟೂರ್ನಿಗಳನ್ನು ಸಂಘಟಿಸುವುದು ಬೇಡ ಎಂಬ ಲೆಕ್ಕಚಾರದಲ್ಲೂ ಐಸಿಸಿ ಇದೆ.
ಅಂದ ಹಾಗೇ ಐಸಿಸಿ ಮುಂದೆ ಮೂರು ಆಯ್ಕೆಗಳಿವೆ. ಅಕ್ಟೋಬರ್ ವೇಳೆ ಕೊರೋನಾ ವೈರಸ್‍ನ ಅಟ್ಟಹಾಸ ಕಮ್ಮಿಯಾದ್ರೆ ಈ ಹಿಂದೆ ನಿಗದಿಯಾದಂತೆ ಟೂರ್ನಿಯನ್ನು ಆಯೋಜಿಸುವುದು. ಎರಡನೇ ಆಯ್ಕೆ ಪ್ರೇಕ್ಷಕರಿಲ್ಲದೆ ಪಂದ್ಯವನ್ನು ಆಯೋಜಿಸುವುದು. ಮೂರನೇಯದ್ದು 2022ಕ್ಕೆ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಮುಂದೂಡುವುದು. ಹೀಗೆ ಮೇ 28ರ ಸಭೆಯಲ್ಲಿ ಐಸಿಸಿ ಈ ಬಾರಿಯ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯ ಭವಿಷ್ಯವನ್ನು ನಿರ್ಧರಿಸಲಿದೆ. ಇದೇ ವೇಳೆ ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಅವರ ಅಧಿಕಾರದ ಅವಧಿಯನ್ನು 2 ತಿಂಗಳುಗಳ ಕಾಲ ವಿಸ್ತರಿಸುವ ಕುರಿತಂತೆ ಚರ್ಚೆ ನಡೆಸಲಾಗುವುದು.








