ಹೊಸದಿಲ್ಲಿ, ಜೂನ್ 5 : ಭೂಗತ ಜಗತ್ತಿನ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಪತ್ನಿ ಮಹಜಬೀನ್ ಗೆ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ವರದಿಗಳು ಹೇಳಿವೆ. ದಾವೂದ್ ಮತ್ತು ಆತನ ಪತ್ನಿಯನ್ನು ಕರಾಚಿಯ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.
ದಾವೂದ್ ಇಬ್ರಾಹಿಂಗೆ ಮೊದಲು ಕೊರೊನಾ ಸೋಂಕು ಪತ್ತೆಯಾಗಿದ್ದು, ನಂತರ ಆತನ ಪತ್ನಿಯಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದೆ. ನಂತರ ಆಕೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಆಕೆಯಲ್ಲೂ ಕೊರೊನಾ ಸೋಂಕು ಪತ್ತೆಯಾಗಿದೆ. ದಾವೂದ್ ಮತ್ತು ಆತನ ಪತ್ನಿಯಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಆತನ ಮನೆಯಲ್ಲಿ ಕೆಲಸ ಮಾಡುವ ಮನೆ ಕೆಲಸಗಾರರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿದೆ ಎಂದು ಮೂಲಗಳು ಹೇಳಿದೆ.
ಉನ್ನತ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದು ಪಾಕ್ ಮಿಲಿಟರಿಯ ಬೆಂಗಾವಲಿನಲ್ಲಿರುವ ದಾವೂದ್ ಇಬ್ರಾಹಿಂ ಮತ್ತು ಆತನ ಪತ್ನಿಗೆ ಮಿಲಿಟರಿ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ವಿಷಯ ಹೊರ ಬಿದ್ದಿದೆ.
ಆದರೂ ಪಾಕಿಸ್ತಾನ ಮಾತ್ರ ದಾವೂದ್ ಕುರಿತು ಯಾವ ಮಾಹಿತಿಯನ್ನು ಬಿಟ್ಟುಕೊಡುತ್ತಿಲ್ಲ.








