ಭ್ರಷ್ಟಾಚಾರ ಎಂಬುದು ಒಂದು ದೊಡ್ಡ ಅಂಟುಜಾಡ್ಯ : ಸಚಿವ ವಿ.ಸೋಮಣ್ಣ Corruption saaksha tv
ಬೆಂಗಳೂರು : ನಗರ ಸೇರಿ ವಿವಿಧ ಜಿಲ್ಲೆಗಳ ಉಸ್ತುವಾರಿ ಯಾರಿಗೆ ನೀಡಬೇಕೆಂಬುದು ಮುಖ್ಯಮಂತ್ರಿಗಳ ಪರಮಾಧಿಕಾರ. ಆ ವಿಚಾರದಲ್ಲಿ ನಾನು ಮೂಗು ತೂರಿಸುವುದಿಲ್ಲ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮುಖ್ಯಮಂತ್ರಿಗಳು ಉಸ್ತುವಾರಿ ಸಚಿವರ ಕುರಿತು ನಿರ್ಧರಿಸಲಿದ್ದಾರೆ ಎಂದು ರಾಜ್ಯದ ವಸತಿ ಮತ್ತು ಮೂಲಸೌಲಭ್ಯ ಸಚಿವರಾದ ವಿ. ಸೋಮಣ್ಣ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಇನ್ನು, ಬೆಂಗಳೂರು ನಗರಕ್ಕೆ ಯಾರನ್ನೂ ಉಸ್ತುವಾರಿ ಸಚಿವರನ್ನಾಗಿ ಮಾಡಿಲ್ಲ. ಕೋವಿಡ್ ನಿರ್ವಹಣೆ, ದಸರಾ ಮತ್ತು ಸ್ವಾತಂತ್ರ್ಯೋತ್ಸವ ಸಂಬಂಧ ತಾತ್ಕಾಲಿಕ ನೇಮಕಾತಿ ಮಾಡಲಾಗಿದೆ ಎಂದು ಸೋಮಣ್ಣ ಅವರು ವರದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು ನನ್ನ ಸ್ನೇಹಿತರು. ಅವರ ಬಳಿ ಇರುವ ಮಾಹಿತಿ ಕುರಿತು ನನಗೆ ತಿಳಿದಿಲ್ಲ. ಐಟಿ ದಾಳಿಯ ಬಗ್ಗೆ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಐಟಿಯವರು ತಮ್ಮ ಕೆಲಸ ಮಾಡುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆ ಯಾರ ಹಂಗಿನಲ್ಲೂ ಇಲ್ಲದ ಒಂದು ಸ್ವಾಯತ್ತ ಸಂಸ್ಥೆ. ಸಮರ್ಪಕವಾಗಿ ಮಾಹಿತಿ ಕ್ರೋಢೀಕರಿಸಿ ಅದು ಸೂಕ್ತ ಕ್ರಮ ಕೈಗೊಳ್ಳುತ್ತದೆ. ಇದೊಂದು ಸಹಜವಾದ ಪ್ರಕ್ರಿಯೆ ಎಂದರು.
ಭ್ರಷ್ಟಾಚಾರ ಎಂಬುದು ಒಂದು ದೊಡ್ಡ ಅಂಟುಜಾಡ್ಯ. ಈ ಜಾಡ್ಯಕ್ಕೆ ಯಾರ್ಯಾರು ಪಿತಾಮಹರು ಎಂದು ಕೂಡ ನಿಮಗೂ ತಿಳಿದಿದೆ. ಭ್ರಷ್ಟಾಚಾರ ತಡೆಯಲು ಐಟಿ, ಇಡಿ ಇಲಾಖೆಗಳಿವೆ. ಭ್ರಷ್ಟಾಚಾರ ತಡೆಯಲು ಕೇಂದ್ರದ ಬಿಜೆಪಿ ಸರಕಾರವು ಈ ಇಲಾಖೆಗಳನ್ನು ಚುರುಕುಗೊಳಿಸಿ ಯಾರೇ ಭ್ರಷ್ಟರಿದ್ದರೂ ಅದನ್ನು ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶ ನೀಡಿರುವುದು ಮೆಚ್ಚತಕ್ಕ ವಿಚಾರ ಎಂದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿಂತ ನೀರಲ್ಲ. ಕೇಂದ್ರದ ಆದಾಯ ತೆರಿಗೆ ಇಲಾಖೆ ತನ್ನ ಕರ್ತವ್ಯ ಮಾಡುವಾಗ ಅವನು ಯಾವ ಪಕ್ಷ, ಯಾರ ಜೊತೆ ಇದ್ದ, ಯಾರ ಪಿಎ ಎಂದು ನೋಡುವುದಿಲ್ಲ ಎಂದರು.
ಸಿಂದಗಿಯ ಅಲಮೇಲದಲ್ಲಿ ಉಪ ಚುನಾವಣೆ ಪ್ರಚಾರ ಮಾಡಿದ್ದೇನೆ. ಅಭಿವೃದ್ಧಿ ಪರವಾಗಿ ಮತ್ತು ಬಿಜೆಪಿ ಪರವಾಗಿ ಜನರು ಬೆಂಬಲ ನೀಡಲಿದ್ದಾರೆ. ಹತ್ತಾರು ಸಾವಿರ ಮತಗಳ ಅಂತರದಲ್ಲಿ ನಾವು ಗೆಲ್ಲುತ್ತೇವೆ ಎಂದು ಸಚಿವರು ಇದೇ ವೇಳೆ ವಿಶ್ವಾಸ .
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರೈತ ಮೋರ್ಚಾ ವತಿಯಿಂದ ಪ್ಲಾಸ್ಟಿಕೇತರ ಬ್ಯಾಗ್ ಬಳಕೆ ಮಾಡುವ ಕಾರ್ಯಕ್ಕೆ ಚಾಲನೆ ಕೊಡಲಾಗಿದೆ ಎಂದರು.
ಇಲಾಖೆಯ ಯೋಜನೆಗಳು ಮತ್ತು ಕಾರ್ಯಗಳನ್ನು ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಮುಟ್ಟಿಸುವ ನಿಟ್ಟಿನಲ್ಲಿ ರಾಜ್ಯ ಕಾರ್ಯಾಲಯಕ್ಕೆ ಭೇಟಿ ನೀಡುವುದು ಒಂದು ಮಹತ್ವದ ಕ್ರಮ. ಇಲ್ಲಿ ಬಂದಾಗ ಸಾಮಾನ್ಯ ಜನರ ಒಡನಾಟವೂ ಆಗಲಿದೆ ಎಂದು ತಿಳಿಸಿದರು. ಇನ್ನು ಸಚಿವರು ಇದೇ ವೇಳೆ ರಾಜ್ಯದ ಜನತೆಗೆ ಮಹಾನವಮಿ ಮತ್ತು ಆಯುಧ ಪೂಜೆಯ ಶುಭಾಶಯ ಕೋರಿದರು.









