ಕೊರೊನಾ ವೈರಾಣು ಜನ್ಮತಾಳಿದ ಚೀನಾದಲ್ಲಿ ಸದ್ಯ ಪರಿಸ್ಥಿತಿ ತಿಳಿಗೊಂಡಿದೆ ಎಂಬ ವರದಿಗಳು ಬರುತ್ತಿವೆ. ಆದ್ರೆ ವಿಶ್ವದಾದ್ಯಂತ ಕೊರೊನಾ ಮರಣಮೃದಂಗ ಬಾರಿಸುತ್ತಿದೆ. ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಚೀನಾದಲ್ಲಿ ನೆಲೆಸಿದ್ದ ನಮ್ಮ ದೇಶ ಸೇರಿದಂತೆ ವಿವಿಧ ದೇಶಗಳ ಜನರು ಜೀವಭಯದಿಂದ ತಮ್ಮ ಸ್ವದೇಶಕ್ಕೆ ಮರಳುತ್ತಿದ್ದಾರೆ. ಈ ಮಧ್ಯೆ ತಾನು ಭಾರತಕ್ಕೆ ಬಂದ್ರೆ ತನ್ನೊಂದಿಗೆ ಕೊರೊನಾ ವೈರಸ್ ಕೂಡ ತನ್ನ ದೇಶಕ್ಕೆ ಬರಬಹುದೆಂಬ ಭೀತಿಯಿಂದ ತನ್ನ ಪ್ರಾಣವನ್ನೂ ಲೆಕ್ಕಿಸದೇ ಕನ್ನಡಿಗನೊಬ್ಬ ಚೀನಾದಲ್ಲೇ ಉಳಿದಿದ್ದಾನೆ.
ಹೌದು..! ತುಮಕೂರಿನ ಹೊಸಕೆರೆ ರಿಜ್ವಾನ್ ಭಾಷಾ ಅವರ ಪುತ್ರ ಸಾಹಿಲ್ ಹುಸೇನ್ ಚೀನಾದ ‘ಜಿಯಾಂಗ್ಸಿ ಯೂನಿವರ್ಸಿಟಿ ಆಫ್ ಟ್ರಡಿಷನಲ್ ಅಂಡ್ ಚೈನೀಸ್ ಮೆಡಿಸಿನ್ಸ್’ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ 3ನೇ ವರ್ಷದ ಎಂಬಿಬಿಎಸ್ ಕಲಿಯುತ್ತಿದ್ದಾರೆ. ಚೀನಾದಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದ್ದಂತೆ ವಿವಿ 90ರಷ್ಟು ವಿಧ್ಯಾರ್ಥಿಗಳು ತಮ್ಮ ತಮ್ಮ ದೇಶಗಳಿಗೆ ಹಿಂತಿರುಗಿದ್ದಾರೆ. ಆದ್ರೆ ಸಾಹಿಲ್ ಹುಸೇನ್ ಮಾತ್ರ ಭಾರತಕ್ಕೆ ಬರಲು ನಿರಾಕರಿಸಿದ್ದಾರೆ.
ನಾನು ಭಾರತಕ್ಕೆ ಬರಲ್ಲ; ವಿಡಿಯೋದಲ್ಲಿ ಸಾಹಿಲ್ ಹೇಳಿದ್ದೇನು?
ಚೀನಾದಲ್ಲಿ ಕೊರೊನಾ ವೈರಸ್ ಹರಡುತ್ತಿದ್ದಂತೆ ಪುತ್ರನಿಗೆ ಕರೆ ಮಾಡಿದ ತಂದೆ ರಿಜ್ವಾನ್ ಭಾಷಾ ತಕ್ಷಣವೇ ಭಾರತಕ್ಕೆ ಮರಳುವಂತೆ ತಿಳಿಸಿದ್ದಾರೆ. ಈ ವೇಳೆ ತಂದೆಯ ಆಹ್ವಾನ ನಿರಾಕರಿಸಿದ ಸಾಹಿಲ್, ನಾನಿಲ್ಲಿ ಕ್ಷೇಮವಾಗಿದ್ದೇನೆ. ಅದೆ ಒಂದು ವೇಳೆ ನಾನು ಭಾರತಕ್ಕೆ ಪ್ರಯಾಣಿಸುವ ವೇಳೆ ಕೊರೊನಾ ವೈರಸ್ ತಗುಲಿ, ನನ್ನ ಮೂಲಕ ಭಾರತ ಪ್ರವೇಶಿಸಬುಹುದು. ಹೀಗಾಗಿ ನಾನು ಚೀನಾದಲ್ಲೇ ಉಳಿಯುತ್ತೇನೆ ಎಂದಿದ್ದಾರೆ.
ಅಲ್ಲದೆ ವಿಡಿಯೋ ಮಾಡಿ ತಾನಿರುವ ಹಾಸ್ಟೆಲ್ ಕೊಠಡಿಯಿಂದ ಸರ್ಜಿಕಲ್ ಮಾಸ್ಕ್ ಧರಿಸಿ ಹೊರಡುವ ಆತ, ಇಡೀ ವಿಶ್ವವಿದ್ಯಾಲಯದ ಆವರಣದಲ್ಲಿ ಸುತ್ತಾಡಿ, ಅಲ್ಲಿನ ಪರಿಸ್ಥಿತಿಯನ್ನು ಪೋಷಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಲ್ಲದೆ ಕೊರೊನಾ ತಡೆಗೆ ಚೀನಾ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದ್ದಾರೆ.
ಇನ್ನು ಈ ವಿಡಿಯೋ ಚೀನಾ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಕನ್ನಡಿಗನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
https://youtu.be/RyFouVx8tDs