ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆಯಾದ ರಾಜಕೀಯ ಶಾಶ್ವತವಲ್ಲ, ಯಾರಪ್ಪನ ಆಸ್ತಿನೂ ಅಲ್ಲ, ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ – ರಾಜ್ಯ ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆಯನ್ನು ಆಧಾರ ಮಾಡಿಕೊಂಡು, ಬಿಜೆಪಿ ಹಿರಿಯ ನಾಯಕ ಗೋವಿಂದ ಕಾರಜೋಳ ಅವರು ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಸಿದ್ದರಾಮಯ್ಯ ಜನವರಿಯಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಸಿದ್ದರಾಮಯ್ಯ ವೈರಾಗ್ಯದ ಮಾತುಗಳನ್ನು ಮಾತನಾಡಿದ್ದಾರೆ. ಅವರ ಹೇಳಿಕೆಗಳನ್ನೂ, ನಡೆಯುತ್ತಿರುವ ರಾಜಕೀಯ ಪರಿಸ್ಥಿತಿಯನ್ನೂ ಗಮನಿಸಿದರೆ ಅವರ ರಾಜೀನಾಮೆಗೆ ಕ್ಷಣಗಣನೆ ಈಗಾಗಲೇ ಆರಂಭವಾಗಿದೆ ಎಂದು ಕಾರಜೋಳ ಹೇಳಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಈಗಾಗಲೇ ನಾಯಕತ್ವ ಬದಲಾವಣೆ ಕುರಿತು ಜೋರಾಗಿ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಪಕ್ಷದಲ್ಲಿಯೂ ಕೆಲ ನಾಯಕರ ಅಸಮಾಧಾನವೇ ಹೆಚ್ಚಾಗಿ ಕೇಳಿ ಬರುತ್ತಿರುವ ಸಂದರ್ಭದಲ್ಲಿ ಕಾರಜೋಳ ಅವರ ಹೇಳಿಕೆ ಬೆಂಕಿಗೆ ಮತ್ತಷ್ಟು ಎಣ್ಣೆ ಸುರಿದಂತಾಗಿದೆ.
ಸಿದ್ದರಾಮಯ್ಯ ನಿಜವಾಗಿಯೂ ರಾಜೀನಾಮೆ ನೀಡಲಿದ್ದಾರೆಯೇ? ಅಥವಾ ಇದು ಕೇವಲ ರಾಜಕೀಯ ಊಹಾಪೋಹವೇ? ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ಸಿಗಬೇಕಿದೆ. ಆದರೆ, ಅವರ ಇತ್ತೀಚಿನ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಯ ದಾರಿಗೆ ಕಾರಣವಾಗಿದೆ.








