ರಾಜ್ಯ ರಾಜಕಾರಣದಲ್ಲಿ ಶೀಘ್ರದಲ್ಲಿ ಭಾರಿ ಬೆಳವಣಿಗೆಗಳು ಸಂಭವಿಸಲಿವೆ ಎಂದು ಭವಿಷ್ಯವಾಣಿ ಹೇಳಿದ ಮಾಜಿ ಮುಖ್ಯಮಂತ್ರಿ ಮತ್ತು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್, ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಕಾಂಗ್ರೆಸ್‌ನಲ್ಲಿ ‘ಟೈಂ ಬಾಂಬ್’ ಸ್ಫೋಟವಾಗಲಿದೆ ಎಂದು ಕಟು ಟೀಕೆ ಮಾಡಿದ್ದಾರೆ.
ಬಿಜೆಪಿಯ ಜನಕ್ರೋಶ ಯಾತ್ರೆಗೆ ಹಾಜರಾಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಿದ್ದರಾಮಯ್ಯ ಅವರು ತಮ್ಮ ವಿರುದ್ಧ ಆಪಾದನೆಗಳು ಬಂದಾಗಲೆಲ್ಲಾ ಜಾತಿ ಜನಗಣತಿ ವರದಿಯನ್ನು ಎಳೆದುಕೊಂಡು ಬರುತ್ತಾರೆ. ಇದು ಲಿಂಗಾಯತ, ಒಕ್ಕಲಿಗ ಮತ್ತು ದಲಿತ ಸಮುದಾಯಗಳನ್ನು ವಿಭಜಿಸಲು ಹಾಕಿದ ಹುನ್ನಾರ,” ಎಂದು ಆರೋಪಿಸಿದರು.
ಸಿದ್ದರಾಮಯ್ಯ ಮೇಲೆ ಕಠಿಣ ವಾಗ್ದಾಳಿ
“ವಿವಾದಾಸ್ಪದ ಜಾತಿ ಗಣತಿ ವರದಿಯು ಈಗ್ಲೇ ಮಂಡನೆಯಾಗಬೇಕಿತ್ತು. ಅಂದಿನ ಆಯೋಗದ ಅಧ್ಯಕ್ಷ ಕಾಂತರಾಜ್ ಅವರು ಸಲ್ಲಿಸಿದ ವರದಿಯನ್ನು ಕೂಡ ಸಿದ್ದರಾಮಯ್ಯ ಸ್ವೀಕರಿಸಿರಲಿಲ್ಲ. ಇಂದು ಅದನ್ನೇ ಮತ್ತೆ ಎಳೆದು, ಜನತೆಯಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ,” ಎಂದು ಶೆಟ್ಟರ್ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ಹೆಚ್ಚಿದೆ.
“ಸಿದ್ದರಾಮಯ್ಯನ ನಂತರ ಡಿಕೆ ಶಿವಕುಮಾರ್ ಮುಖ್ಯಮಂತ್ರಿಪದಕ್ಕಾಗಿ ಕಾಯುತ್ತಿದ್ದಾರೆ. ಈ ಆಂತರಿಕ ಪೈಪೋಟಿ ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಪಕ್ಷದೊಳಗಿನ ‘ಮಹಾ ಸ್ಫೋಟ’ಕ್ಕೆ ಕಾರಣವಾಗಲಿದೆ. ಈಗಾಗಲೇ ಟೈಂ ಬಾಂಬ್ ಫಿಕ್ಸ್ ಆಗಿದೆ,” ಎಂದು ಅವರು ವ್ಯಂಗ್ಯವಾಡಿದರು.
“ಸಿದ್ದರಾಮಯ್ಯ ಜಾತಿ ಗಣತಿ ವರದಿಯನ್ನು ಮುಸ್ಲಿಮರನ್ನು ಪ್ರೊಜೆಕ್ಟ್ ಮಾಡಲು ಬಳಸುತ್ತಿದ್ದಾರೆ. ಆದರೆ ಇದು ಇತರೆ ಪ್ರಮುಖ ಸಮುದಾಯಗಳಿಗೆ ಅಪಾಯವನ್ನುಂಟುಮಾಡುವ ಧೋರಣೆಯಾಗಿದೆ,” ಎಂದು ಶೆಟ್ಟರ್ ತೀವ್ರ ಟೀಕೆ ಮಾಡಿದ್ದಾರೆ.








