ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಆಗಮನಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಡೊನಾಲ್ಡ್ ಟ್ರಂಪ್ ಅವರನ್ನ ಬರಮಾಡಿಕೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇನ್ನು ಕೆಲವೇ ಹೊತ್ತಿನಲ್ಲಿ ಗುಜರಾತ್ ನ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ.
ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ ಜೊತೆ ಪತ್ನಿ ಮೆಲಾನಿಯಾ ಟ್ರಂಪ್, ಪುತ್ರಿ ಇವಾಂಕಾ ಟ್ರಂಪ್ ಮತ್ತು ಉನ್ನತ ಮಟ್ಟದ ನಿಯೋಗ ಭಾರತಕ್ಕೆ ಆಗಮಿಸಲಿದೆ. ಅಹಮದಾಬಾದ್ ವಿಮಾನ ನಿಲ್ದಾಣದಿಂದ ಸಬರ್ಮತಿ ಆಶ್ರಮಕ್ಕೆ ಆಗಮಿಸಿ, ಅಲ್ಲಿಂದ ಮೊಟೆರಾ ಸ್ಟೇಡಿಯಂಗೆ ಪ್ರಧಾನಿ ಮೋದಿ ಮತ್ತು ಟ್ರಂಪ್ ಅವರು ರೋಡ್ ಶೋ ನಡೆಸಲಿದ್ದಾರೆ. ಉಭಯ ನಾಯಕರ ರೋಡ್ ಶೋನಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಹಾಗೇ ಜಗತ್ತಿನ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ಲೋಕಾರ್ಪಣೆ ಮಾಡಲಿರುವ ಟ್ರಂಪ್, ಸ್ಟೇಡಿಯಂ ಆವರಣದಲ್ಲಿ ಆಯೋಜಿಸಿರುವ ‘ನಮಸ್ತೆ ಟ್ರಂಪ್‘ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾರತ ಹಾಗೂ ಅಮೆರಿಕಾದ ಸ್ನೇಹ ಬಾಂಧವ್ಯದ ಕುರಿತು ಜಗತ್ತಿಗೆ ಸಾರಲಿದ್ದಾರೆ. ಅಮೆರಿಕಾ ಅಧ್ಯಕ್ಷರ ಆಗಮನದ ಹಿನ್ನೆಲೆ ಮೊಟೆರಾದಲ್ಲಿ ಖಾಕಿ ಕಣ್ಗಾವಲಿರಿಸಲಾಗಿದೆ.
ಮೊಟೆರಾ ಸ್ಟೇಡಿಯಂ ಸುತ್ತ 16 ಕಡೆಗಳಲ್ಲಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕಡೆಯಲ್ಲಿ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ನ ಮೂವರು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.








