ಮಡಿಕೇರಿ: ರಿಯಲ್ ಎಸ್ಟೇಟ್ ಮಾಫಿಯಾ (Real Estate Mafia)ಕ್ಕೆ ದಂಪತಿ ಬಲಿಯಾಗಿದ್ದು, ಬರೋಬ್ಬರಿ 12 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಪಿರಿಯಾಪಟ್ಟಣ ತಾಲೂಕಿನ ಬೈಲಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಹೊನ್ನೂರ್ ಕಾವಲ್ ನಲ್ಲಿ ಈ ಪ್ರಕರಣ ನಡೆದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಕೊಡಗಿನ ಕುಶಾಲನಗರದಲ್ಲಿ (Kushalnagar) ಉದ್ಯಮ ನಡೆಸುತ್ತಿದ್ದ ಮೂಲತಃ ಕೊಪ್ಪ ನಿವಾಸಿ ಸುರೇಶ್ (40) ಹಾಗೂ ಅವರ ಪತ್ನಿ ಪಲ್ಲವಿ (28) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊಪ್ಪ ನಿವಾಸಿ ಜಯಣ್ಣ ಅವರ ಪುತ್ರ ಸುರೇಶ್ ತನ್ನ ಪತ್ನಿಯನ್ನು ದೇವಸ್ಥಾನಕ್ಕೆಂದು ಹೇಳಿ ದೊಡ್ಡಹೊನ್ನೂರು ಕಾವಲ್ ನ ಜಮೀನಿನ ಹತ್ತಿರ ಖಾಲಿ ಮನೆಗೆ ಕರೆತಂದಿದ್ದು ಅಲ್ಲಿ ಇಬ್ಬರೂ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಸುರೇಶ್ ಸಾವನ್ನಪ್ಪಿದ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದ್ದು, ಸಾವಿಗೆ ಕಾರಣರಾದವರ 12 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಕುಟುಂಬಸ್ಥರು ಗುರುವಾರ ಮೃತದೇಹಗಳನ್ನು ಮುಂದಿಟ್ಟು ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಶವಾಗಾರದ ಮುಂಭಾಗ ದಂಪತಿಗಳ ಸಾವಿಗೆ ಕಾರಣರಾದ ರಿಯಲ್ ಎಸ್ಟೇಟ್ ಮಾಫಿಯಾಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.
ಆರೋಪಿಗಳು ಪ್ರಭಾವ ಶಾಲಿಗಳಾಗಿದ್ದು ಹಲವರಿಗೆ ವಂಚನೆ ಎಸಗಿದ್ದಾರೆ. ಇದರಿಂದ ಅಮಾಯಕ ದಂಪತಿ ಪ್ರಾಣ ಕಳೆದುಕೊಳ್ಳುವಂತಾಗಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಆರೋಪಿಗಳನ್ನು ಕೂಡಲೆ ಬಂಧಿಸಿ ಕ್ರಮಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.