ಬೆಂಗಳೂರು : ಕೊರೊನಾ ವೈರಸ್ ವಿಚಾರವಾಗಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಶಾಸಕ ಶಿವಲಿಂಗೇಗೌಡರು ಸದನದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇಂದು ಸದನದಲ್ಲಿ ಕೊರೊನಾ ವಿಚಾರವಾಗಿ ಸರ್ಕಾರದ ವಿರುದ್ಧ ಗುಡುಗಿದ ಶಿವಲಿಂಗೇಗೌಡರು, ಖಾಸಗಿ ಆಸ್ಪತ್ರೆಗಳು ಕೊರೊನಾ ಚಿಕಿತ್ಸೆಗೆ ಮೂರೂವರೆ ಲಕ್ಷ ವಸೂಲಿ ಮಾಡುತ್ತಿವೆ.
ಸಚಿವರು ಆಸ್ಪತ್ರೆಗಳನ್ನು ಹೊಗಳಿಕೊಂಡಿದ್ದೇ ಹೊಗಳಿಕೊಂಡಿದ್ದು, ಏನ್ ಕಡಿದು ಕಟ್ಟೆ ಹಾಕಿದ್ರು ಅಂತ ಹೊಗಳಿದ್ದೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಮುಂದುವರಿದು, ಕೊರೊನಾ ಕಿಟ್ ಖರೀದಿಗಳ ಬಗ್ಗೆ ಮಾತನಾಡಿ 300 ರೂ.ಗೆ ಕಿಟ್ ಸಿಗುತ್ತೆ, ಅದನ್ನು 2500 ರೂ.ಗೆ ಮಾರುತ್ತಾರೆ.
ಯಾವ್ಯಾವ ಕಂಪನಿಯಿಂದ ನೀವು ಮೆಡಿಕಲ್ ಕಿಟ್ ಪಡೆದಿದ್ದೀರಾ? ಅದನ್ನು ಎಲ್ಲೆಲ್ಲಿಂದ ತಂದು ಕೊಡುತ್ತಾರೆ ನಿಮಗೆ ಗೊತ್ತಾ? ಆಕ್ಸಿಜನ್ ಹಾಕಿದರೆ ಮಧ್ಯಾಹ್ನಕ್ಕೆ ಮುಗಿಯುತ್ತೆ.
ರಾತ್ರಿಹೊತ್ತಿಗೆ ಪೇಶೆಂಟ್ ಹೋಗಿಬಿಡುತ್ತಾನೆ. ಇದರಲ್ಲಿ ಏನೇನಾಗಿದೆ ದೇವರೇ ನೋಡಿಕೊಳ್ಳುತ್ತಾನೆ. ಅಂತವರಿಗೆ ದೊಡ್ಡ ರೋಗ ಬರುತ್ತೆ ಎಂದು ಶಿವಲಿಂಗೇಗೌಡ ಗುಡುಗಿದರು.
ಬಳಿಕ ರ್ಯಾಪಿಡ್ ಟೆಸ್ಟ್ ವಿಳಂಬದ ಬಗ್ಗೆ ಮಾತನಾಡಿದ ಶಿವಲಿಂಗೇಗೌಡರು, ರ್ಯಾಪಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಬಂದರೆ ಆರ್.ಟಿ.ಪಿ.ಸಿ.ಆರ್ ನಲ್ಲಿ ನೆಗೆಟಿವ್ ಬರುತ್ತೆ.
ರಿಪೋರ್ಟ್ ಬರೋದು ಮೂರ್ನಾಲ್ಕು ದಿನ ಆಗುತ್ತೆ. ಅಲ್ಲಿ ತನಕ ಟೆಸ್ಟ್ ಮಾಡಿಸಿದವನು ಎಲ್ಲ ಕಡೆ ಸುತ್ತಾಡಿಕೊಂಡು ಎಲ್ಲರಿಗೂ ಸೋಂಕು ಅಂಟಿಸಿ ಹೋಗುತ್ತಾನೆ. ಇದೇನಾ ವ್ಯವಸ್ಥೆ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.








