ಬೀಜಿಂಗ್, ಮೇ 22 : ಪ್ರಪ್ರಥಮವಾಗಿ ಚೀನಾದ ವುಹಾನ್ ನಲ್ಲಿ ಡಿಸೆಂಬರ್ ಕೊನೆಯಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ಸೋಂಕು, ನಂತರ ಜಗತ್ತಿನಾದ್ಯಂತ ಪಸರಿಸಿ ಲಕ್ಷ ಕ್ಕಿಂತಲೂ ಹೆಚ್ಚಿನ ಜನರ ಸಾವಿಗೆ ಕಾರಣ ವಾಗಿ, 50ಲಕ್ಷಕ್ಕಿಂತಲೂ ಹೆಚ್ಚು ಜನರಿಗೆ ಬಾಧಿಸಿ, ಜಾಗತಿಕ ಬಿಕ್ಕಟ್ಟಿಗೆ ಕಾರಣವಾಗಿ ನಿಂತಿದೆ.
ಇಡೀ ವಿಶ್ವದಲ್ಲಿ ಇಲ್ಲಿಯವರೆಗೆ 52,07,911 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದ್ದರೆ, 3,34,848 ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
ವಿಶ್ವದ ಬಹುತೇಕ ರಾಷ್ಟ್ರಗಳ ಮೇಲೆ ತನ್ನ ಕರಿಛಾಯೆ ಬೀರಿರುವ ಕೊರೋನಾ ಸೋಂಕು ಬಲಿಷ್ಟ ರಾಷ್ಟ್ರಗಳಾದ ಅಮೇರಿಕಾ, ಇಟಲಿ, ಬ್ರೆಜಿಲ್, ಸ್ಪೇನ್, ಯು.ಕೆ. ಫ್ರಾನ್ಸ್ ಗಳನ್ನು ತಲ್ಲಣಗೊಳಿಸಿದೆ. ಸೋಂಕಿನಿಂದ ನಲುಗಿ ಹೋಗಿರುವ ದೇಶಗಳು ಈ ವೈರಸ್ ನ ಅಟ್ಟಹಾಸಕ್ಕೆ ಕೊನೆ ಹಾಡಲು ಹರ ಸಾಹಸ ಪಡುತ್ತಿವೆ. ಮಾರ್ಚ್ ನಿಂದ ವಿಶ್ವವನ್ನೇ ಲಾಕ್ ಡೌನ್ ನಲ್ಲಿರಿಸಿ ಜಾಗತಿಕ ಬಿಕ್ಕಟ್ಟಿಗೆ ಕಾರಣವಾಗಿರುವ ಕೊರೊನಾ ಸೋಂಕು ಇದೀಗ ತನ್ನ ಮತ್ತೊಂದು ಸ್ವರೂಪವನ್ನು ತೋರಿಸಲು ಆರಂಭಿಸಿದೆ. ಕೊರೋನಾ ಕೇಂದ್ರ ಚೀನಾದಲ್ಲಿ ಮತ್ತೆ ತನ್ನ ರೌದ್ರ ಅವತಾರ ತೋರಿಸಲು ಸಜ್ಜಾಗಿರುವ ಕೊರೊನಾ ಸೋಂಕು ತನ್ನ ಎರಡನೇ ಅಲೆ ಆರಂಭಿಸಿದೆ.
ಚೀನಾದ ಈಶಾನ್ಯ ಭಾಗದಲ್ಲಿ ಪತ್ತೆಯಾಗುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಗುಣಲಕ್ಷಣಗಳು ಭಿನ್ನವಾಗಿದ್ದು, ಎರಡನೇ ಅಲೆಯ ಆತಂಕ ಶುರುವಾಗಿದೆ. ಇದೀಗ ಪತ್ತೆಯಾಗುತ್ತಿರುವ ಕೊರೋನಾ ಪ್ರಕರಣಗಳಲ್ಲಿ ಯಾವುದೇ ಗುಣ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದಾಗಿ ಇತರರಿಗೆ ಸೋಂಕು ಸುಲಭವಾಗಿ ಹರಡುತ್ತಿದೆ. ಈ ಮೊದಲು ವುಹಾನ್ ನಲ್ಲಿ ಕಂಡುಬಂದ ಸೋಂಕಿನಲ್ಲಿ ಕೊರೋನಾ ವೈರಾಣು ಒಬ್ಬ ವ್ಯಕ್ತಿಯ ದೇಹಕ್ಕೆ ಸೇರಿದರೆ ಒಂದೆರಡು ವಾರಗಳಲ್ಲೇ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಈಗ ರೋಗ ಲಕ್ಷಣಗಳು ಕಂಡು ಬರುತ್ತಿಲ್ಲ ಮತ್ತು ಕೆಲವರಲ್ಲಿ ದೀರ್ಘಾವಧಿಯ ಬಳಿಕ ಕಂಡುಬರುತ್ತಿವೆ. ಹೀಗಾಗಿ ಸೋಂಕಿತರನ್ನು ಮತ್ತು ಸಂಪರ್ಕಿತರನ್ನು ಪತ್ತೆ ಹಚ್ಚುವಷ್ಟರಲ್ಲಿ ಅದು ಸಾಕಷ್ಟು ಮಂದಿಗೆ ಹರಡಿರುತ್ತದೆ.
ಅಷ್ಟೇ ಅಲ್ಲ ಈಶಾನ್ಯ ಚೀನಾದಲ್ಲಿ ಕೊರೊನಾ ವೈರಾಣು ಬಹು ದಿನಗಳ ಕಾಲ ಸೋಂಕಿತರ ದೇಹದಲ್ಲಿ ಇರುವುದು ಕೂಡ ಗಮನಕ್ಕೆ ಬಂದಿದೆ. ಇದರಿಂದ ಕೊರೊನಾ ರೋಗಿಗಳು ಸಂಪೂರ್ಣ ಗುಣಮುಖರಾಗಲು ದೀರ್ಘ ಸಮಯ ತೆಗೆದುಕೊಳ್ಳುತ್ತಿದ್ದಾರೆ. ವುಹಾನ್ ನ ಕೊರೊನಾ ರೋಗಿಗಳಲ್ಲಿ ಹೃದಯ, ಕಿಡ್ನಿ ಸೇರಿದಂತೆ ಬಹು ಅಂಗ ವೈಫಲ್ಯದಂತ ಪ್ರಕರಣಗಳೇ ಹೆಚ್ಚಿದ್ದರೆ, ಈಶಾನ್ಯದ ರೋಗಿಗಳಲ್ಲಿ ಶ್ವಾಸಕೋಶಕ್ಕೆ ಹಾನಿಯಾಗುವಂಥ ಪ್ರಕರಣಗಳೇ ಹೆಚ್ಚಿವೆ.
ಕೊರೊನಾ ವೈರಸ್ ರೂಪಾಂತರ ಹೊಂದಿದ್ದು, ತನ್ನ ಎರಡನೇ ಅಲೆ ಪ್ರಾರಂಭಿಸಿರಬಹುದು ಎಂದು ಹೇಳಲಾಗುತ್ತಿದೆ.