ನವದೆಹಲಿ: ಭಾರತದಲ್ಲಿ ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಇದೀಗ ಸೋಂಕಿತರ ಸಂಖ್ಯೆ 21,000 ಗಡಿ ದಾಟಿದೆ. ಅಲ್ಲದೆ, ಕೇವಲ 24 ಗಂಟೆಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 49 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾಸುರನಿಗೆ ಬಲಿಯಾದವರ ಸಂಖ್ಯೆ 681 ಏರಿಕೆಯಾಗಿದೆ.
ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಮಾಹಿತಿ ನೀಡಿದ್ದು, ದೇಶದಲ್ಲಿ 21393 ಮಂದಿ ಸೋಂಕಿಗೊಳಗಾಗಿದ್ದು, ವೈರಸ್’ಗೆ 681 ಮಂದಿ ಬಲಿಯಾಗಿದ್ದಾರೆ. ಸೊಂಕಿಗೊಳಗಾಗಿರುವ 21393 ಮಂದಿಯ ಪೈಕಿ 16454 ಮಂದಿ ದೇಶದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 4257 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆಂದು ಹೇಳಿದೆ.
ದೇಶದಲ್ಲಿ ಸಿಕ್ಕಿಂ ಹೊರತುಪಡಿಸಿದರೆ ಉಳಿದೆಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕನಿಷ್ಟ ಒಂದಾದರೂ ಪ್ರಕರಣಗಳು ಈ ವರೆಗೆ ಬೆಳಕಿಗೆ ಬಂದಿದೆ. ಮಹಾರಾಷ್ಟ್ರ ರಾಜ್ಯದಲ್ಲಿಯೇ ಅತೀ ಹೆಚ್ಚು ಸೋಂಕಿತ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ವರೆಗೂ ಆ ರಾಜ್ಯದಲ್ಲಿ 5,221 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 251 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಗುಜರಾತ್ ರಾಜ್ಯದಲ್ಲಿ 2,272 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದರೆ, 95 ಮಂದಿ ಸಾವನ್ನಪ್ಪಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2,156 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 47 ಮಂದಿ ಸಾವನ್ನಪ್ಪಿದ್ದಾರೆ. ರಾಜಸ್ತಾನದಲ್ಲಿ 1,801 ಸೋಂಕು ಪತ್ತೆಯಾಗಿದ್ದು, 25 ಮಂದಿ ಬಲಿಯಾಗಿದ್ದಾರೆ. ತಮಿಳುನಾಡಿನಲ್ಲಿ 1,596 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 18 ಜನರು ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದಲ್ಲಿ 1,592 ಜನರಲ್ಲಿ ಸೋಂಕು ಪತ್ತೆಯಾಗಿದ್ದರೆ, 80 ಮಂದಿ ಸಾವನ್ನಪ್ಪಿದ್ದಾರೆ.








