ಗುಡ್ ನ್ಯೂಸ್ : ಕೋವಿಶೀಲ್ಡ್ ಲಸಿಕೆಯಿಂದ ಶೇ.93ರಷ್ಟು ರಕ್ಷಣೆ..!
ಕೋವಿಡ್ 3ನೇ ಅಲೆ ಅಪ್ಪಳಿಸುವ ಭೀತಿ ನಡುವೆಯೇ ಜನರಿಗೆ ಸಮಾಧಾನಕರ ವಿಷಯವೊಂದು ಗೊತ್ತಾಗಿದೆ. ಮೇಡ್ ಇನ್ ಇಂಡಿಯಾ ಕೋವಿಶೀಲ್ಡ್ ಲಸಿಕೆಯು ಕೊರೊನಾ ವಿರುದ್ಧ ಶೇ 93ರಷ್ಟು ರಕ್ಷಣೆ ನೀಡುತ್ತೆ ಎಂದು ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು ನಡೆಸಿರುವ ಅಧ್ಯಯನದಿಂದ ತಿಳಿದು ಬಂದಿದೆ.
ಹೌದು.. ಕೋವಿಡ್‌ನಿಂದಾಗಿ ಮರಣ ಪ್ರಮಾಣದಲ್ಲಿ ಈ ಲಸಿಕೆಯಿಂದಾಗಿ ಶೇ 98ರಷ್ಟು ಇಳಿಕೆ ಕಂಡುಬಂದಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್ ತಿಳಿಸಿದ್ದಾರೆ. ಕೋವಿಡ್ ಪಿಡುಗಿನ 2ನೇ ಅಲೆ ಸಂದರ್ಭದಲ್ಲಿ ಎಎಫ್‌ಎಂಸಿ ಈ ಅಧ್ಯಯನ ಕೈಗೊಂಡಿತ್ತು. ಕೋವಿಶೀಲ್ಡ್ ಲಸಿಕೆ ನೀಡಲಾಗಿದ್ದ ವೈದ್ಯರು ಹಾಗೂ ಮುಂಚೂಣಿಯಲ್ಲಿರುವ ಕಾರ್ಯಕರ್ತರು ಸೇರಿ 15 ಲಕ್ಷ ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಲಸಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ಕೊರೊನಾ ಸೋಂಕಿನ ತೀವ್ರತೆಯನ್ನು ಲಸಿಕೆ ಕಡಿಮೆ ಮಾಡುತ್ತದೆ. ಆದರೆ, ಲಸಿಕೆ ಹಾಕಿಸಿಕೊಳ್ಳುವುದು ಎಂದರೆ, ಸೋಂಕು ತಗುಲುವುದಿಲ್ಲ ಎಂಬ ಖಾತ್ರಿಯೇನಲ್ಲ ಎಂದು ಸಹ ತಿಳಿಸಿದ್ದಾರೆ. ಲಸಿಕೆ ಹಾಕಿಸಿಕೊಂಡ ನಂತರವೂ ಸೋಂಕು ತಗುಲಿದರೆ, ಅದು ತೀವ್ರಸ್ವರೂಪದ ಕಾಯಿಲೆಯಾಗದಂತೆ ಲಸಿಕೆ ತಡೆಯುತ್ತದೆ ಎಂದು ತಿಳಿಸಿದ್ದಾರೆ.








