ಲಾಕ್ ಡೌನ್ ಫಿಕ್ಸ್..? ಭಾರತದಲ್ಲಿ ಕೊರೊನಾ ಮಹಾಸ್ಫೋಟ – 2 ಲಕ್ಷಕ್ಕೂ ಅಧಿಕ ಕೇಸ್ ಪತ್ತೆ – 1038 ಸಾವು..!
ನವದೆಹಲಿ: ದೇಶದಲ್ಲಿ ಕೊರೊನಾ 2ನೇ ಅಲೆ ಮೊದಲ ಬಾರಿಗಿಂತಲೂ ತೀವ್ರವಾಗಿ ಅಪ್ಪಳಿಸಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2ಲಕ್ಷಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ಒಂದೇ ದಿನ 1038 ಜನರು ಬಲಿಯಾಗಿದ್ದಾರೆ.
ದಿನೇ ದಿನೇ ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದ್ದು, ದೈನಂದಿನ ಕೇಸ್ ಗಳು 2 ಲಕ್ಷ ಗಡಿ ಮೀರಿದೆ. ಇದರಿಂದಾಗಿ ದೇಶದಲ್ಲಿ ಮತ್ತೆ ಲಾಕ್ ಡೌನ್ ಆಗೋ ಎಲ್ಲಾ ಲಕ್ಷಣಗಳು ದಟ್ಟವಾಗಿವೆ. ಇನ್ನೂ ರಾಜ್ಯದಲ್ಲೂ ಸಹ 9 ಸಾವಿರಕ್ಕಿಂತ ಅಧಿಕ ಕೇಸ್ ಗಳು ಬೆಳಕಿಗೆ ಬರುತ್ತಿದ್ದು, ಕನಿಷ್ಠ ಅಂದ್ರು 10 ದಿನಗಳವರೆಗೂ ಲಾಕ್ ಡೌನ್ ಮಾಡುವ ಸಾಧ್ಯತೆಗಳಿವೆ.
ಇನ್ನೂ ಒಂದೇ ದಿನ ಇಷ್ಟೊಂದು ಪ್ರಕರಣಗಳು ಪತ್ತೆಯಾಗಿದ್ದು ದೇಶದಲ್ಲಿ ಇದೇ ಮೊದಲು ಎಂದು ವರದಿ ತಿಳಿಸಿದೆ. ಭಾರತದಲ್ಲಿ ಒಂದೇ ದಿನ 2,00,739 ಕೋವಿಡ್ 19 ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಕೋವಿಡ್ ಪ್ರಕರಣಗಳ ಸಂಖ್ಯೆ 1,40,74,564ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು 1,73,123 ಮಂದಿ ಈವರೆಗೆ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1,06,173ಕ್ಕೆ ಹೆಚ್ಚಳವಾಗಿದೆ. ಕೋವಿಡ್ 19 ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 1,24,29,564ಕ್ಕೆ ಏರಿಕೆಯಾಗಿದೆ.