ಗಾಳಿಯಿಂದ ವೇಗವಾಗಿ ಹರಡಬಲ್ಲದು ಕೋವಿಡ್ 19 ವೈರಸ್ – ವಿಜ್ಞಾನಿಗಳಿಂದ ಬಹಿರಂಗ
ವಾಷಿಂಗ್ಟನ್, ಜುಲೈ 6: ಕೊರೋನವೈರಸ್ ಸೋಂಕು ಗಾಳಿಯಿಂದ ವೇಗವಾಗಿ ಹರಡುತ್ತದೆ ಮತ್ತು ಇದು ಕೊರೊನಾ ವೈರಸ್ ನ ಹರಡುವಿಕೆಯ ಪ್ರಮುಖ ಮಾರ್ಗವಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಕೆಮ್ಮು, ಸೀನು ಮುಖಾಂತರ ಕೊರೊನಾ ಸೋಂಕಿತ ವ್ಯಕ್ತಿಯಿಂದ ಚಿಕ್ಕ ದ್ರವಕಣವೂ ಸ್ಪರ್ಶ ಮತ್ತು ಆತ ಮುಟ್ಟಿದ ವಸ್ತುಗಳಿಂದ ಇತರರಿಗೆ ಹರಡುವುದು ಮಾತ್ರವಲ್ಲದೆ ಗಾಳಿಯಿಂದ ಕೂಡ ವೇಗವಾಗಿ ಹರಡುತ್ತದೆ ಎಂಬ ಭಯಾನಕ ಮಾಹಿತಿಯನ್ನು ವಿಜ್ಞಾನಿಗಳು ಹೊರ ಹಾಕಿದ್ದಾರೆ.
1995 ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಪಡೆದ ಮಾರಿಯೋ ಜೆ. ಮೋಲಿನಾ ಸೇರಿದಂತೆ ಹಲವು ವಿಜ್ಞಾನಿಗಳು ಕೋವಿಡ್ 19 ವೈರಸ್ ನ ಚಿಕ್ಕ ದ್ರವಕಣ ಕೂಡಾ ಗಾಳಿಯಲ್ಲಿ ಸೇರಿಕೊಂಡರೆ ಮನುಷ್ಯನಿಗೆ ಸೋಂಕು ತಗುಲಲು ಕಾರಣವಾಗಬಲ್ಲದು ಎಂದು ತಿಳಿಸಿದ್ದಾರೆ.
ಯುಎಸ್ನ ಕ್ಯಾಲಿಫೋರ್ನಿಯಾ ಸ್ಯಾನ್ ಡಿಯಾಗೋ ವಿಶ್ವವಿದ್ಯಾಲಯದ ಸಂಶೋಧಕರು ಸೇರಿದಂತೆ ಹಲವು ಸಂಶೋಧಕರು, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕೋವಿಡ್ 19 ಕುರಿತ ಈ ಶಿಫಾರಸ್ಸನ್ನು ಪರಿಷ್ಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದು, ಡಬ್ಲ್ಯುಎಚ್.ಒ ದೀರ್ಘಕಾಲದವರೆಗೆ ಸಂಪರ್ಕ ಪ್ರಸರಣ ತಡೆಗಟ್ಟುವಿಕೆಗೆ ಮಾತ್ರ ಒತ್ತು ನೀಡಿದ್ದು, ಗಾಳಿಯಲ್ಲಿ ಸೋಂಕು ಪ್ರಸರಿಸುವ ಬಗ್ಗೆ ಕಡೆಗಣಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೋವಿಡ್ 19 ವೈರಸ್ ಕೆಮ್ಮು, ಸೀನು ಮತ್ತು ಸನಿಹ ನಿಂತು ಮಾತನಾಡುವ ಸಂದರ್ಭದಲ್ಲಿ ಮಾತ್ರವಲ್ಲದೇ ಚಿಕ್ಕ ದ್ರವಕಣವೂ ಗಾಳಿಯಲ್ಲಿ ಕೂಡ ಸೇರಿಕೊಂಡು ಮನುಷ್ಯನ ದೇಹದೊಳಗೆ ಸೇರಿಕೊಂಡು ಸೋಂಕು ಹರಡಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದು, ಮನೆಯ ಹೊರಗಾಗಲಿ ಅಥವಾ ಒಳಗಾಗಲಿ ಸೀನಿದ ಬಳಿಕ ಗಾಳಿಯಲ್ಲಿ ದೊಡ್ಡ ಪ್ರಮಾಣದಲ್ಲಿ ದ್ರವ ಪ್ರಮಾಣ ಸೇರಿ ಗಾಳಿಯಲ್ಲಿ ಹರಡುತ್ತದೆ. ಅಷ್ಟೇ ಅಲ್ಲ ಅತಿ ಸಣ್ಣ ಕಣಗಳಿಂದಲೂ ಸೋಂಕು ಹರಡುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.