‘ಅಪ್ಪ ಅಂಬಾರಿ ಹೊತ್ತ ಎಂದು ಮರಿಯಾನೆಗೂ ಕೊಡಲಾಗದು’ : ಸರ್ಕಾರದ ವಿರುದ್ಧ ಸಿ.ಪಿ ಯೋಗೇಶ್ವರ್ ಕಿಡಿ
ಮೈಸೂರು: ಸಚಿವ ಸಿಪಿ ಯೋಗೇಶ್ವರ್ ಅವರು ಸರ್ಕಾರದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆ ವೈಭವಕ್ಕೆ ಆಗುವುದಲ್ಲ. ಅಂಬಾರಿ ಹೊರಲು ಯಾವ ಆನೆ ಸೂಕ್ತ ಎಂಬುದು ಮುಖ್ಯ ಎಂದು ಹೇಳುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ಧಾರೆ.
ಮೈಸೂರಿನಲ್ಲಿ ಮಾತನಾಡಿರುವ ಯೋಗೇಶ್ವರ್ ಅವರು , ಸಿಎಂ ಎಂದರೆ ರಾಜ್ಯದ ಜನತೆ ಆಶೋತ್ತರಗಳಿಗೆ ಸ್ಪಂದಿಸಬೇಕು. ಸಿಎಂ ಬಹಳ ಸಂವೇದನಾಶೀಲರಾಗಿರಬೇಕು. ಅಂಬಾರಿ ಹೊರಬೇಕು ಎಂದರೆ ಯಾವ ಆನೆ ಸೂಕ್ತ, ಭಾರ ಹೊರಲು ಸಾಧ್ಯವೇ ಎಂಬುದನ್ನು ಯೋಚಿಸಿ ಆನೆ ಬದಲಿಸುತ್ತಾರೆ. ಹಾಗೇ ಬದಲಾವಣೆ ಎಂಬುದು ಜಗದ ನಿಯಮ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಅಲ್ಲದೇ ಅಂಬಾರಿಯನ್ನು ಅರ್ಜುನ ಒಂದಷ್ಟು ವರ್ಷ ಹೊತ್ತ, ಅಭಿಮನ್ಯು ಹೊತ್ತ, ಬಲರಾಮ ಒಂದಷ್ಟು ವರ್ಷ ಹೊತ್ತ ಹೀಗಂತ ಅದರ ಮರಿಯಾನೆಗೂ ಅಂಬಾನಿ ಹೊರಲು ಅವಕಾಶ ಕೊಡಲು ಆಗಲ್ಲ. ಅಪ್ಪ ಹೊತ್ತಿದ್ದಾನೆ ಎಂದು ಮರಿಯಾನೆಗೂ ಅಂಬಾರಿ ಹೊರಿಸಲಾಗುತ್ತಾ. ಅದು ಸಾಧ್ಯವಿಲ್ಲ. ಬದಲಾವಣೆ ಪ್ರಕೃತಿ ಸಹಜ. ಮುಂದಿನ ದಿನಗಳಲ್ಲಿ ಕಾದು ನೋಡೋಣ ಎಂದು ಪರೋಕ್ಷವಾಗಿ ಬಿ ವೈ ವಿಜಯೇಂದ್ರೂ ಟಾಂಗ್ ಕೊಟ್ಟಿದ್ದಾರೆ.
ಅಲ್ಲದೇ ಇದು ನನ್ನ ಸರ್ಕಾರ ಅನ್ನುವ ಭಾವನೆ ನನಗೆ ಬರುತ್ತಿಲ್ಲ. ನನಗೆ ಆಗುತ್ತಿರುವ ನೋವು, ಚಿತ್ರಹಿಂಸೆಯನ್ನು ಹೇಳುತ್ತಿದ್ದೇನೆ. ಅದರಲ್ಲಿ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ನಮ್ಮ ಸರ್ಕಾರವಿದ್ದರೂ, ವಿರೋಧಪಕ್ಷದವರ ಕೈ ಮೇಲಾಗುತ್ತಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಮೀಸಲಾತಿ ಕೂಡ ಹೆಚ್.ಡಿ. ಕುಮಾರಸ್ವಾಮಿ ಹೇಳಿದಂತೆಯೇ ಆಗುತ್ತಿದೆ. ಸಾಕಷ್ಟು ಬಾರಿ ಹಿಂಸೆಯಾಗಿದೆ ಎಂದು ಹೇಳಿದ್ದಾರೆ.
ಈ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಕೊಡಿಸಲು ಆಗುತ್ತಿಲ್ಲ. ರಾಜ್ಯದ ಜನತೆಗೆ ಸಾಮಾಜಿಕ ನ್ಯಾಯ ಕೊಡಿಸಲು ಆಗುತ್ತಿಲ್ಲ. ಡಿಕೆ ಶಿವಕುಮಾರ್, ಹೆಚ್.ಡಿ. ಕುಮಾರಸ್ವಾಮಿಯೊಂದಿಗೆ ಮುಖ್ಯಮಂತ್ರಿ ಹೊಂದಾಣಿಕೆ ಸದಾ ಇದೆ. ರಾಜ್ಯದಲ್ಲಿ ವಿರೋಧಪಕ್ಷಗಳು ಇಲ್ಲವೆಂದು ಎಂದು ಸಿಪಿ ಯೋಗೇಶ್ವರ್ ಬೇಸರ ಹೊರಹಾಕಿದ್ದಾರೆ.
ಸಿಎಂ ಬಿಎಸ್ ವೈ ಜೊತೆ ಹೆಚ್ ಡಿಕೆ ಭೇಟಿ – ಕುತೂಹಲ ಕೆರಳಿಸಿದ ಉಭಯ ನಾಯಕರ ನಡೆ