ಸಿಪಿಎಲ್ 2020- ಬಾರ್ಬೊಡಸ್ ವಿರುದ್ಧ ಸುಲಭ ಜಯ ಸಾಧಿಸಿದ ಗಯಾನ ವಾರಿಯರ್ಸ್
2020ರ ಕೆರೆಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಗಯಾನ ಅಮೇಝಾನ್ ವಾರಿಯರ್ಸ್ ತಂಡ ಗೆಲುವಿನ ಹಾದಿಯಲ್ಲಿ ಮುನ್ನಡೆಯುತ್ತಿದೆ. ಟೂರ್ನಿಯ 26ನೇ ಪಂದ್ಯದಲ್ಲಿ ಗಯಾನ ಅಮೇಝಾನ್ ವಾರಿಯರ್ಸ್ ತಂಡ ಆರು ವಿಕೆಟ್ ಗಳಿಂದ ಬಾರ್ಬೊಡಸ್ ಟ್ರಿಡೆಂಟ್ಸ್ ತಂಡವನ್ನು ಪರಾಭವಗೊಳಿಸಿದೆ.
ಈ ಮೂಲಕ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ. ಆಡಿರುವ ಹತ್ತು ಪಂದ್ಯಗಳಲ್ಲಿ ಗಯಾನ ವಾರಿಯರ್ಸ್ ತಂಡ ಆರು ಪಂದ್ಯಗಳಲ್ಲಿ ಜಯ ಹಾಗೂ ನಾಲ್ಕು ಪಂದ್ಯಗಳಲ್ಲಿ ಸೋಲು ಅನುಭವಿಸಿ ಒಟ್ಟು 12 ಅಂಕಗಳನ್ನು ಪಡೆದುಕೊಂಡಿದೆ. ಇನ್ನು ಬಾರ್ಬೊಡಸ್ ಟ್ರಿಡೆಂಟ್ಸ್ ತಂಡ ಆಡಿರುವ 9 ಪಂದ್ಯಗಳಲ್ಲಿ 2 ಗೆಲುವು ಮತ್ತು ಏಳು ಸೋಲಿನೊಂದಿಗೆ ಕೇವಲ 4 ಅಂಕ ಪಡೆದು ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಬಾರ್ಬೊಡಸ್ ತಂಡ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ.
ಟ್ರಿನಿಡಾಡ್ ನ ಬ್ರಿಯಾನ್ ಲಾರಾ ಮೈದಾನದಲ್ಲಿ ಟಾಸ್ ಗೆದ್ದ ಗಯಾನ ವಾರಿಯರ್ಸ್ ಮೊದಲು ಬಾರ್ಬೊಡಸ್ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತ್ತು. ರೊಮಾರಿಯೊ ಶಫರ್ಡ್ (22ಕ್ಕೆ3) ಮತ್ತು ಇಮ್ರಾನ್ ತಾಹೀರ್ (12ಕ್ಕೆ3) ಅಮೋಘ ಬೌಲಿಂಗ್ ದಾಳಿಯ ಎದುರು ಬಾರ್ಬೊಡಸ್ ಬ್ಯಾಟ್ಸ್ ಮೆನ್ ಗಳು ರನ್ ಗಳಿಸಲು ಒದ್ದಾಟ ನಡೆಸಿದ್ರು. ಪರಿಣಾಮ ಬಾರ್ಬೊಡಸ್ ಟ್ರಿಡೆಂಟ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿತ್ತು. ಆರಂಭಿಕರಾದ ಚಾಲ್ರ್ಸ 10 ರನ್ ಮತ್ತು ಗ್ರೀವ್ಸ್ 10 ರನ್ ಹಾಗೂ ಸ್ಯಾಂಟ್ನರ್ 18 ರನ್, ನಯಿಮ್ ಯಂಗ್ 18 ರನ್ ದಾಖಲಿಸಿದ್ರು. ಇನ್ನುಳಿದ ಬ್ಯಾಟ್ಸ್ ಮೆನ್ ಗಳು ಒಂದಂಕಿ ಮೊತ್ತಕ್ಕೆ ಸೀಮಿತರಾದ್ರು.
ಗೆಲ್ಲಲು 90 ರನ್ ಗಳ ಸುಲಭ ಸವಾಲನ್ನು ಬೆನ್ನಟ್ಟಿದ್ದ ಗಯಾನ ವಾರಿಯರ್ಸ್ ತಂಡ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಬ್ರೆಂಡನ್ ಕಿಂಗ್ ಶೂನ್ಯ ಸುತ್ತಿದ್ರು. ನಂತರ ಹೇಮ್ರಾಜ್ 29 ರನ್ ಮತ್ತು ಶಿಮ್ರೋನ್ ಹೆಟ್ಮೆರ್ 32 ರನ್ ಗಳಿಸಿ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿದ್ರು. ಅಂತಿಮವಾಗಿ ಗಯಾನ ವಾರಿಯರ್ಸ್ ತಂಡ 14.2 ಓವರ್ ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು. ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ರೊಮಾರಿಯೊ ಶಫರ್ಡ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.